





ನನ್ನ ಉದ್ಯಮಕ್ಕೂ ನದಿ ತಿರುವು ಯೋಜನೆಗೂ ಯಾವ ಸಂಬಂಧವೂ ಇಲ್ಲ : ಶಾಸಕ ಶಿವರಾಮ ಹೆಬ್ಬಾರ್
ನದಿ ತಿರುವು ಯೋಜನೆಗೂ ನನ್ನ ಉದ್ಯಮಕ್ಕೂ ಯಾವ ಸಂಬಂಧವೂ ಇಲ್ಲ, ಇಂತಹ ಊಹಾಪೋಹಗಳಿಗೆ ಯಾವುದೇ ಆಸ್ಪದವಿಲ್ಲ,ನಾವು ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನ, ಆದೇಶವನ್ನು ಪಾಲಿಸುತ್ತೇವೆ. ನದಿ ತಿರುವು ಯೋಜನೆಯನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ನಡೆದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜಕಾರಣದಿಂದ ಈ ಹೋರಾಟವನ್ನು ದೂರ ಇಡಬೇಕು. ಹೋರಾಟದಲ್ಲಿ ರಾಜಕೀಯ ಮಾಡಬಾರದು, ನಾವು ಜನಪ್ರತಿನಿಧಿಗಳು ಒಟ್ಟಾಗಿ ಈ ಯೋಜನೆಯ ವಿರುದ್ಧ ಎಲ್ಲಾ ರೀತಿಯಲ್ಲಿ, ಎಲ್ಲಾ ಹಂತದಲ್ಲಿ ಹೋರಾಡುತ್ತೇವೆ, ಈ ಯೋಜನೆ ರದ್ದು ಮಾಡಲು ನಮ್ಮ ಎಲ್ಲಾ ಶಕ್ತಿಯನ್ನು ಬಳಸುತ್ತೇವೆ. ವಿಜ್ಞಾನಿಗಳೇ ಇಂತಹ ಯೋಜನೆ ರೂಪಿಸಲು ಕಾರಣ, ಸರ್ಕಾರ ಅನುಷ್ಠಾನಗೊಳಿಸುತ್ತದೆ, ಇದಕ್ಕೆ ನಾವು ಕಾರಣರಲ್ಲ ಎಂದ ಅವರು ಯೋಜನೆಯ ವಿರುದ್ಧ ಜನಪರ ಮತ್ತು ಕಾನೂನಾತ್ಮಕ ಹೋರಾಟ ಮಾಡೋಣ,
ರಾಜಕೀಯ ನಾಯಕರನ್ನು ವಿಶ್ವಾಸಕ್ಕೆ ಪಡೆಯೋಣ, ಅಗತ್ಯ ಕಾನೂನಾತ್ಮಕ ಹೋರಾಟ ಮಾಡೋಣ, ಜಿಲ್ಲೆಯ ಒಳಿತಿಗಾಗಿ ಎಲ್ಲರೂ ಸೇರಿ ಹೋರಾಡೋಣ, ಈಗಾಗಲೇ ಹಲವು ಯೋಜನೆ ಮೂಲಕ ಈ ಜಿಲ್ಲೆಯಿಂದ ಸಾಕಷ್ಟು ಕೊಡುಗೆ ಕೊಟ್ಟಿದ್ದೇವೆ, ಜಿಲ್ಲೆಯಲ್ಲಿ ಇನ್ನು ಇಂತಹ ಯೋಜನೆಗಳಿಗೆ ಆಸ್ಪದವಿಲ್ಲ, ನಾವು ಸ್ವರ್ಣವಲ್ಲೀ ಶ್ರೀಗಳ ನೇತ್ರತ್ವದಲ್ಲಿ ಸಂಘಟನಾತ್ಮಕ ಹೋರಾಟ ಮಾಡೋಣ ಎಂದರು.
ಜನಪ್ರತಿನಿಧಿಗಳು, ವಿಜ್ಞಾನಿಯ ನಡುವೆ ಮಾತಿನ ಚಕಮಕಿ

ವೇದಿಕೆಯಲ್ಲಿ ಪರಿಸರ ತಜ್ಞ, ವಿಜ್ಞಾನಿ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ನದಿ ತಿರುವು ಯೋಜನೆ ವಿರುದ್ಧ ಉತ್ತರಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸಿಲ್ಲ, ಕೇವಲ ಭಾಷಣದಲ್ಲಿ ಮಾತ್ರ ವಿರೋಧಿಸಿದಂತೇ ಮಾತನಾಡುತ್ತಾರೆ ಎಂದದ್ದು, ಕೆಲ ಕಾಲ ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಯಿತು. ಮಾತಿನ ಚಕಮಕಿ ನಡೆಯಿತು.
ಶಾಸಕ ಶಿವರಾಮ ಹೆಬ್ಬಾರ್ ಅವರು ಕುಮಾರಸ್ವಾಮಿ ಅವರ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು,
ನಾವು ಈ ಯೋಜನೆಯನ್ನು ವಿರೋಧಿಸಿ, ಯೋಜನೆಯನ್ನು ರದ್ದುಗೊಳಿಸಲು ನಮ್ಮ ನೆಲೆಯಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು. ಸಂಸದ ಕಾಗೇರಿಯವರೂ ಸಹ ಹೆಬ್ಬಾರ್ ಅವರ ಮಾತನ್ನು ಬೆಂಬಲಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ

ನದಿ ತಿರುವು ಯೋಜನೆಯನ್ನು ವಿರೋಧಿಸಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ ಶಶಿ ಅವರಿಗೆ ಮನವಿ ಸಲ್ಲಿಸಿ, ಪ್ರತಿಭಟನೆಯನ್ನು ಮಂಗಳವಾರ ಮಧ್ಯಾಹ್ನ 1.30 ಕ್ಕೆ ಮುಕ್ತಾಯಗೊಳಿಸಲಾಯಿತು.

=================
















[…] […]