




ಹೆದ್ದಾರಿ ತಡೆ ಪ್ರತಿಭಟನೆ ಮುಕ್ತಾಯ: ಜನಪ್ರತಿನಿಧಿಗಳು ಏನಂದ್ರು?

ನದಿ ತಿರುವು ಯೋಜನೆಯನ್ನು ವಿರೋಧಿಸಿ ಮಂಗಳವಾರ ಯಲ್ಲಾಪುರದಲ್ಲಿ ನಡೆದ ಹೆದ್ದಾರಿ ತಡೆ ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯವಾಗಿದೆ, ಈ ಪ್ರತಿಭಟನೆಯಲ್ಲಿ ಎಂಟು ಸಾವಿರದಷ್ಟು ಜನರು ಪಾಲ್ಗೊಂಡರು. ಪಟ್ಟಣದ ಎಲ್.ಎಸ್.ಎಂ.ಪಿ ಸೊಸೈಟಿ ಎದುರು ಹೆದ್ದಾರಿಯಲ್ಲಿ ಧರಣಿ ಕುಳಿತು ಜನರು ನದಿ ತಿರುವು ಯೋಜನೆಯ ವಿರುದ್ಧ ಘೋಷಣೆ ಕೂಗಿದರು. ಹೆದ್ದಾರಿ ಪಕ್ಕದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಜನಪ್ರತಿನಿಧಿಗಳು ಹಾಗೂ ಹೋರಾಟ ಸಮೀತಿಯ ಪ್ರಮುಖರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

ನದಿ ತಿರುವು ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ನದಿ ತಿರುವು ಯೋಜನೆಗೂ ನನ್ನ ಉದ್ಯಮಕ್ಕೂ ಯಾವುದೇ ಸಂಬಂಧವಿಲ್ಲ: ಶಾಸಕ ಹೆಬ್ಬಾರ್
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಉದ್ದೇಶಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಹೆದ್ದಾರಿ ತಡೆ ಹೋರಾಟ ಸಮೀತಿಯ ಹರಿಪ್ರಕಾಶ ಕೋಣೆಮನೆ ಮಾತನಾಡಿದರು.
ಧಾರಣಾ ಸಾಮರ್ಥ್ಯ ಅಧ್ಯಯನವಾಗಲಿ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮೊದಲು ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗಬೇಕು, ಧಾರಣಾ ಸಾಮಥ್ರ್ಯ ಅಧ್ಯಯನವಾಗದೇ ಯಾವುದೇ ಯೋಜನೆಯನ್ನು ಜಾರಿಗೊಳಿಸಬಾರದು, ಸರ್ಕಾರಗಳು ಜನ ಶಕ್ತಿಗೆ ಮಣಿಯಲೇ ಬೇಕು, ಈ ಯೋಜನೆಯನ್ನು ರದ್ದುಗೊಳಿಸಲು ಯಾವೆಲ್ಲ ಪ್ರಯತ್ನಗಳು ಬೇಕೋ ಅವೆಲ್ಲವನ್ನೂ ನಾವು ಮಾಡುತ್ತೇವೆ, ಜನರೊಂದಿಗೆ ನಾವಿದ್ದೇವೆ ಎಂದರು.
ಇದನ್ನೂ ಓದಿ: ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ: ಪರಿಸರ ತಜ್ಞ ಬಿ.ಎಂ.ಕುಮಾರಸ್ವಾಮಿ ಆಕ್ರೋಶ
ಎಲ್ಲಾ ಸರ್ಕಾರಗಳೂ ನಮಗೆ ಬೇಡವಾದ ಯೋಜನೆಯನ್ನು ಹೇರುತ್ತಿವೆ.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇರಲಿ, ಬಿಜೆಪಿ ಸರ್ಕಾರ ಇರಲಿ ನಮ್ಮ ಜಿಲ್ಲೆಯ ಜನರಿಗೆ ಬೇಡವಾದ ಯೋಜನೆಯನ್ನು ನಮ್ಮ ಮೇಲೆ ಹೇರುತ್ತಿವೆ, ನದಿ ತಿರುವು ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸುತ್ತಿರುವವರು ನಮ್ಮ ಜಿಲ್ಲೆಯ ವಾಸ್ತವಿಕ, ನೈಜ ಸ್ಥಿತಿಯನ್ನು ಅರಿತಿಲ್ಲ, ಜಿಲ್ಲೆಯ ಜನರ ನೋವನ್ನು ಆಲಿಸಬೇಕು, ಇಂತಹ ಸಭೆಗೆಬಂದು ಅವರು ತಮ್ಮ ಮಾತನ್ನು ಹೇಳುವ ಧೈರ್ಯ ತೋರಲಿ, ನೀರೇ ಇರದ ನದಿಯಿಂದ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ನೀರನ್ನು ಒಯ್ಯುವುದು ಹೇಗೆ? ಈ ಯೋಜನೆ ಜಾರಿಯಾಗಲು ನಾವು ಬಿಡುವುದಿಲ್ಲ ಎಂದ ಅವರು ಸಂಸದ ಕಾಗೇರಿ ನೇತ್ರತ್ವದಲ್ಲಿ ನಿಯೋಗ ಒಯ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಯೋಜನೆ ನಿಲ್ಲಿಸಲು ಆಗ್ರಹಿಸೋಣ ಎಂದರು.
ಜನಪ್ರತಿನಿಧಿಗಳು ಒಟ್ಟಾಗಿ ವಿರೋಧಿಸಲಿ

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆ ತ್ಯಾಗದ ಜಿಲ್ಲೆಯಾಗಿದೆ, ಅನೇಕ ಯೋಜನೆಗಳಿಗೆ ನಮ್ಮ ನೆಲವನ್ನು ತ್ಯಾಗ ಮಾಡಿದ್ದೇವೆ, ಈಗ ಮತ್ತೊಮ್ಮೆ ಅವೈಜ್ಞಾನಿಕ ಯೋಜನೆಯ ವಿರುದ್ಧ ಜನರು ಹೋರಾಟ ನಡೆಸುವಂತಾಗಿದೆ. ವಿಧಾನ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರೂ ಒಟ್ಟಾಗಿ ಈ ಯೋಜನೆಯ ವಿರುದ್ಧ ಧ್ವನಿ ಎತ್ತಬೇಕು, ಹೀಗಾದರೆ ಮಾತ್ರ ಯೋಜನೆಯನ್ನು ತಡೆಯಬಹುದು ಎಂದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ಪ್ರತಿಭಟನಾ ಸಭೆಯಲ್ಲಿ ಒಟ್ಟು ಐದು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹೆದ್ದಾರಿ ತಡೆ ಪ್ರತಿಭಟನಾ ಸಮೀತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಸಭೆಯ ನಿರ್ಣಯಗಳನ್ನು ಮಂಡಿಸಿದರು.
- ಇದು ಜನ ಶಕ್ತಿ ಕೇಂದ್ರಿತ ಸಭೆಯೇ ಹೊರತೂ ಜನಪ್ರತಿನಿಧಿ ಕೇಂದ್ರಿತ ಸಭೆಯಲ್ಲ, ಪ್ರಜ್ಞಾವಂತ ಜನರು ಪಕ್ಷಬೇಧ ಮರೆತು ಎಲ್ಲರಿಗೂ ಗೌರವ ಆದರವನ್ನು ತೋರಿದ್ದೇವೆ, ಮತ್ತೆ, ಮತ್ತೆ ಜಿಲ್ಲೆಯಲ್ಲಿ ದೊಡ್ಡ, ದೊಡ್ಡ ಯೋಜನೆಗಳಿಗೆ ತ್ಯಾಗ ಮಾಡಲು ಸಿದ್ಧರಿಲ್ಲ
- ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಒಂದೆಡೆ ಸೇರಿ, ಈ ಯೋಜನೆಗೆ ತಡೆಹಾಕುವ ಬಗ್ಗೆ 15 ದಿನಗಳ ಒಳಗೆ ಗಟ್ಟಿಯಾದ ತೀರ್ಮಾನವನ್ನು ಕೈಗೊಳ್ಳಬೇಕು, ಇದು ಸಾಧ್ಯವಾಗದಿದ್ದರೆ ಜನಪ್ರತಿನಿಧಿಗಳ ಕಣ್ಣು ತೆರೆಸುವ ಇತರ ಮಾರ್ಗಗಳನ್ನು ಶೋಧಿಸಬೇಕಾಗಬಹುದು
- ಮಾರಕ ಯೋಜನೆಗಳಿಂದ ಆತಂಕಕ್ಕೆ ಸಿಲುಕಿರುವ ಜನರು ಕೇಂದ್ರ ಮತ್ತು ರಾಜ್ಯದ ಮಂತ್ರಿಗಳ, ಶಾಸಕರ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕಾರ ಹಾಕುವಂತಹ ತೀರ್ಮಾನ ಕೈಗೊಳ್ಳಬಹುದು.
- ಪಶ್ಚಿಮ ಘಟ್ಟದ ಮಹತ್ವದ ಪರಿಸರ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವಂತಹ ನಿರ್ಣಯವನ್ನು ಕೈಗೊಳ್ಳಬಹುದು
- ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ,ಜಿಲ್ಲೆಯ ಹಿತ ಕಾಪಾಡಲು ಒಮ್ಮತದ ತೀರ್ಮಾನ ಕೈಗೊಳ್ಳಬೇಕು

=================















