





ಹೆದ್ದಾರಿ ತಡೆ ಪ್ರತಿಭಟನೆಯ ಸಮಗ್ರ ವರದಿ

ನದಿ ತಿರುವು ಯೋಜನೆಯನ್ನು ವಿರೋಧಿಸಿ ಮಂಗಳವಾರ ಯಲ್ಲಾಪುರದಲ್ಲಿ ಅಭೂತಪೂರ್ವವಾಗಿ ನಡೆದ ಹೆದ್ದಾರಿ ತಡೆ ಪ್ರತಿಭಟನೆಯ ಸಂದರ್ಭದಲ್ಲಿ ಕಂಡುಬಂದ ಕೆಲವು ಪ್ರಮುಖ ಘಟನಾವಳಿಗಳ, ಪ್ರಮುಖ ವಿದ್ಯಮಾನಗಳ ಸಮಗ್ರ ವರದಿ ಇಲ್ಲಿದೆ.
ಓದಿ: ಹೆದ್ದಾರಿ ತಡೆ ಪ್ರತಿಭಟನೆಗೆ ಸಂಬಂಧಿಸಿ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಮಾಧ್ಯಮದಲ್ಲಿ ಪ್ರಕಟವಾದ ಎಲ್ಲಾ ವರದಿಗಳು ಇಲ್ಲಿವೆ.
ನದಿ ತಿರುವು ಯೋಜನೆ ವಿರೋಧಿಸಿ ಪ್ರತಿಭಟನೆ ಆರಂಭ
ನದಿ ತಿರುವು ಯೋಜನೆ ಮೂರ್ಖತನದ ನಿರ್ಣಯ: ಪರಿಸರ ತಜ್ಞ ಬಿ.ಎಂ.ಕುಮಾರಸ್ವಾಮಿ ಆಕ್ರೋಶ
ನದಿ ತಿರುವು ಯೋಜನೆಗೂ ನನ್ನ ಉದ್ಯಮಕ್ಕೂ ಯಾವುದೇ ಸಂಬಂಧವಿಲ್ಲ: ಶಾಸಕ ಹೆಬ್ಬಾರ್
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದ, ಶಾಸಕರು ಏನಂದ್ರು? ಸಂಪೂರ್ಣ ವರದಿ ಇಲ್ಲಿದೆ
ನದಿ ತಿರುವು ಯೋಜನೆ ಹಿಮ್ಮೆಟ್ಟಿಸಲು ಜನರು ಒಗ್ಗಟ್ಟಾದರು, ಜನಪ್ರತಿನಿಧಿಗಳು ಒಂದಾಗುವರೇ? ವಿದ್ಯಮಾನದ ವಿಶ್ಲೇಷಣೆ
ಸ್ವರ್ಣವಲ್ಲೀ ಶ್ರೀಗಳ ನೇತ್ರತ್ವಕ್ಕೆ ಜೈಕಾರ

ನದಿ ತಿರುವು ಯೋಜನೆಗೆ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನ ಹಾಗೂ ನೇತ್ರತ್ವ ಇರುವುದರಿಂದಲೇ ಪ್ರತಿಭಟನೆಗೆ ನಾವು ಬಂದಿದ್ದೇವೆ, ಶ್ರೀಗಳ ನೇತ್ರತ್ವದ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ಮಾತು ಎಲ್ಲ ಜನರಿಂದ ಕೇಳಿಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಂಸದ ಕಾಗೇರಿ

ಹೆದ್ದಾರಿ ತಡೆ ಪ್ರತಿಭಟನೆಗೆ ಸಂಸದ ಕಾಗೇರಿಯವರು ಯಲ್ಲಾಪುರಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಮಳಲಗಾವ ಸಮೀಪ ಸಂಭವಿಸಿದ ಅನಿರೀಕ್ಷಿತ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಸ್ವತಃ ಕಾಗೇರಿಯವರು ತಮ್ಮ ವಾಹನದಲ್ಲಿ ಕೂರಿಸಿಕೊಂಡುಬಂದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸಲು ವೈದ್ಯರಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.
ಆಂಬ್ಯಲೆನ್ಸ್ ಗೆ ದಾರಿಬಿಟ್ಟ ಪ್ರತಿಭಟನಾಕಾರರು

ಹೆದ್ದಾರಿ ತಡೆ ಸಂದರ್ಭದಲ್ಲಿ, ಹೆದ್ದಾರಿಯಲ್ಲಿ ಸಾಗುವ ಯಾವುದೇ ವಾಹನಕ್ಕೆ ಸಂಚರಿಸಲು ಅವಕಾಶ ಇರಲಿಲ್ಲ, ಆದರೆ ತುರ್ತಾಗಿ ಸಾಗುತ್ತಿದ್ದ ಆಂಬ್ಯಲೆನ್ಸ್ ಒಂದು ಹೆದ್ದಾರಿಯಲ್ಲಿ ಆಗಮಿಸಿದಾಗ, ಹೆದ್ದಾರಿಯಲ್ಲಿ ಕುಳಿತಿದ್ದ ಜನರು ಬದಿಗೆ ಸರಿದು ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಮಹಿಳಾ ಶಕ್ತಿಯ ಅನಾವರಣ

ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಮತ್ತು ಬೃಹತ್ ಮೆರವಣಿಗೆಯಲ್ಲಿ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು, ಯೋಜನೆಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ವೇದಿಕೆಯಲ್ಲಿ ಭಜನೆ, ದೇಶಭಕ್ತಿಗೀತೆ ಪ್ರಸ್ತುತಪಡಿಸಿ ಗಮನ ಸೆಳೆದರು.
ಸುವ್ಯವಸ್ಥಿತ ಭೋಜನ ವ್ಯವಸ್ಥೆ

ನೂರಾರು ಕಾರ್ಯಕರ್ತರ ಶ್ರಮದಿಂದ ಹಾಗೂ ಸಂಘಟಕರ ಮಾರ್ಗದರ್ಶನದೊಂದಿಗೆ ಊಟೋಪಚಾರ ವ್ಯವಸ್ಥೆಯು ಅಚ್ಚುಕಟ್ಟಾಗಿ ನಡೆಯಿತು. ಪ್ರತಿಭಟನೆಗೆ ಬಂದ ಸಾವಿರಾರು ಜನರಿಗೆ ಯಾವುದೇ ಗೊಂದಲವಿಲ್ಲದೇ, ಸುವ್ಯವಸ್ಥಿತವಾಗಿ ಊಟದ ವಿತರಣೆ ನಡೆಯಿತು.
ಕುಡಿಯುವ ನೀರಿನ ವ್ಯವಸ್ಥೆ

ಪ್ರತಿಭಟನೆಗೆ ಬಂದಿದ್ದ ಜನರಿಗೆ ಅಗತ್ಯಕ್ಕೆ ಬೇಕಾದಷ್ಟು ನೀರಿನ ಪ್ಯಾಕೆಟ್ಗಳನ್ನು ನಿರಂತರವಾಗಿ ವಿತರಿಸುತ್ತಿದ್ದ ಕಾರ್ಯಕರ್ತರು, ಬಿಸಿಲಿನ ತಾಪಕ್ಕೆ ಜನರು ಬಸವಳಿಯದಂತೆ ಕಾಳಜಿ ವಹಿಸಿದರು.

ಗಮನ ಸೆಳೆದ ವಾದ್ಯವೃಂದ
ಪ್ರತಿಭಟನೆಗೆ ಆಗಮಿಸಿದ್ದ ಕೆಲವು ಜನರು ಶಂಖ, ಜಾಗಟೆ ಮುಂತಾದವುಗಳ ನಿನಾದದೊಂದಿಗೆ ಹೆದ್ದಾರಿ ತಡೆ ಮತ್ತು ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು.
ಅಂಗಡಿ,ಮುಂಗಟ್ಟುಗಳು ಬಂದ್

ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪಟ್ಟಣದ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು, ಅಂಗಡಿಕಾರರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಜನರ ಜೊತೆಗೆ ಜನಪ್ರತಿನಿಧಿಗಳ ಸಾಥ್

ಮಂಗಳವಾರ ಬೆಳಿಗ್ಗೆಯಿಂದಲೇ ಹಲವಾರು ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಜನರೊಂದಿಗೆ ಬೆರೆತು ಮಾತುಕತೆ ನಡೆಸುತ್ತಿರುವುದು ಕಂಡುಬಂತು. ಮೆರವಣಿಗೆ ಸಂದರ್ಭದಲ್ಲಿಯೂ ಜನಪ್ರತಿನಿಧಿಗಳು ಜನರೊಂದಿಗೆ ಹೆಜ್ಜೆಹಾಕಿದರು.
ಕೈಕೊಟ್ಟ ಮೈಕ್

ಎಲ್.ಎಸ್.ಎಂ.ಪಿ ಸೊಸೈಟಿ ಎದುರಿನ ವೇದಿಕೆಯಲ್ಲಿ ಮಾತನಾಡಲು ಜನಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಮೈಕ್ ಮುಂದೆ ಬರುತ್ತಿದ್ದಂತೇ ಮೈಕ್ ಕೈಕೊಟ್ಟಿತು. ಇಪ್ಪತ್ತು ನಿಮಿಷಗಳ ಕಾಲ ಮೈಕ್ ಕೈಕೊಟ್ಟಕಾರಣ ಭಾಷಣದ ಆರಂಭಕ್ಕೆ ವಿಳಂಬವಾಯಿತು.
ಸಂಘಟಕರಲ್ಲಿ ಸಾರ್ಥಕಭಾವ

ಪ್ರತಿಭಟನೆಯ ಯಶಸ್ಸಿಗಾಗಿ ಸಂಘಟಕರು ಕಳೆದ ಎರಡು ತಿಂಗಳಿನಿಂದ ಶ್ರಮಿಸುತ್ತಿದ್ದರು. ಯಾವುದೇ ಕಪ್ಪುಚುಕ್ಕೆ ಇಲ್ಲದೇ ಪ್ರತಿಭಟನಾ ಕಾರ್ಯಕ್ರಮ ಯಶಸ್ವಿಯಾಗಿರುವುದು ಸಂಘಟಕರಲ್ಲಿ ಸಾರ್ಥಕಭಾವ ಮೂಡಿಸಿದೆ. ಜನರ ಸ್ಪಂದನೆಯೂ ಉತ್ತಮವಾಗಿತ್ತು.
ಕೇಳಿಸದ ಕುಮಾರ ಕಲಾನಂದ ಮಣಿ ಮಾತು
ಗೋವಾದ ಖ್ಯಾತ ಪರಿಸರ ತಜ್ಞ ಕುಮಾರ ಕಲಾನಂದ ಮಣಿಯವರು ಪ್ರತಿಭಟನಾ ವೇದಿಕೆಗೆ ಆಗಮಿಸಿದ್ದಾರೆಂದು ಸಂಘಟಕರು ಅವರಿಗೆ ಸ್ವಾಗತ ಕೋರಿದ್ದರು. ಆದರೆ ಭಾಷಣಕ್ಕೆ ಅವರಿಗೆ ಅವಕಾಶ ಸಿಗದೇ ಅವರ ಮಾತನ್ನು ಕೇಳಬೇಕು ಎಂದಿದ್ದವರಿಗೆ ನಿರಾಸೆಯಾಯಿತು.
ಸೂಕ್ತ ಪೋಲಿಸ್ ಬಂದೋಬಸ್ತ್
ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಒಬ್ಬರು ಎಎಸ್ಪಿ, ಇಬ್ಬರು ಡಿವೈಎಸ್ಪಿ, ಐದು ಪಿಐ, 12 ಪಿಎಸ್ಸೈ, 15 ಎಸ್ಸೈ ಹಾಗೂ 250 ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.


================















