ಬೆಂಗಳೂರಿನಿಂದ ಮಡಗಾಂವ್ ವರೆಗೂ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯು ಶುಕ್ರವಾರದಿಂದ ಅಧಿಕೃತವಾಗಿ ಆರಂಭವಾಗಿದ್ದು, ಶನಿವಾರ ಬೆ. 2.30 ಕ್ಕೆ ಕಾರವಾರಕ್ಕೆ ಆಗಮಿಸಿದ ಈ ರೈಲನ್ನು ರೈಲ್ವೆ ನಿಲ್ದಾಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದರು.

ನಂತರ ಮಾತನಾಡಿದ ಅವರು ಈ ಎಕ್ಸ್‍ಪ್ರೆಸ್ ರೈಲು ಜಿಲ್ಲೆಯ ಮುರುಡೇಶ್ವರ , ಗೋಕರ್ಣ ಮತ್ತು ಕಾರವಾರದಲ್ಲಿ ನಿಲುಗಡೆ ಮಾಡಲಿದ್ದು ಜಿಲ್ಲೆಗೆ ಈ ರೈಲನ್ನು ನೀಡಿದಕ್ಕೆ ಪ್ರಧಾನ ಮಂತ್ರಿಗಳು, ಕೇಂದ್ರ ರೈಲ್ವೆ ಸಚಿವರು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.

ಕೊಂಕಣ ರೈಲ್ವೆಯ ಮೂಲಭೂತ ಸೌಕರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೊಂಕಣ ರೈಲ್ವೆ ಸುಧಾರಣೆಗಾಗಿ ಸುಮಾರು ರೂ 7,000 ಕೋಟಿ ಅನುಮೋದನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಈ ಅನುದಾನವನ್ನು ಅನುಷ್ಠಾನಕ್ಕೆ ತರುವುದರಿಂದ ಕೊಂಕಣ ರೈಲ್ವೆಗೆ ಸಂಬಂಧಿಸಿದ ಅನೇಕ ಅವಶ್ಯಕತೆಗಳು ಈಡೇರಲಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.

ಮಣಿಪುರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ತಾಲೂಕಿನ ಗಣಗೇರಿ ಗಿರೀಶ ಭಾಸ್ಕರ ನಾಯ್ಕ ಅವರು ಇತ್ತೀಚೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೆ ಮೃತಪಟ್ಟಿದ್ದರು. ಮೃತ ಯೋಧನ ಮನೆಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಪ್ರಸನ್ನ ಹೆಗಡೆ ಹೊಳೆಬೈಲ್ ಭೇಟಿ ನೀಡಿ ಶ್ರದ್ದಾಂಜಲಿ ಅರ್ಪಿಸಿ ತಮ್ಮ ಕೈಲಾದ ಆರ್ಥಿಕ ಸಹಾಯ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅನಂತಮೂರ್ತಿ ಹೆಗಡೆ ಅಗ್ನೀವಿರ್ ನಲ್ಲಿ ಆಯ್ಕೆ ಗೊಂಡು ಮಣೀಪುರದಲ್ಲಿ ದೇಶಸೇವೆ ಸಲ್ಲಿಸುತ್ತಿದ್ದ ಹೆಮ್ಮೆಯ ವೀರ ಯೋಧ ಗಿರೀಶ ಭಾಸ್ಕರ ನಾಯ್ಕ ಅವರು ಹುತಾತ್ಮರಾಗಿದ್ದಾರೆ. ಗಾಳಿ, ಮಳೆ, ಚಳಿ ಸೇರಿದಂತೆ ಏನೇ ಅಡೆತಡೆಗಳು ಎದುರಾದರೂ ಎದೆಗುಂದದೆ ಯೋಧರು ದೇಶವನ್ನು ಕಾಯುತ್ತಿದ್ದಾರೆ. ಸೈನಿಕರು ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವುದಕ್ಕೆ ನಾವು ದೇಶದೊಳಗೆ ನೆಮ್ಮದಿಯಿಂದಿದ್ದೇವೆ. ಮೃತ ಯೋಧ ಗಿರೀಶ ನಾಯ್ಕ ಅವರ ತಂದೆ ಭಾಸ್ಕರ ನಾಯ್ಕ ಹಾಗೂ ತಾಯಿ ರೇವತಿ ನಾಯ್ಕ ಅವರು ಇಂತಹ ಹೆಮ್ಮೆಯ ಪುತ್ರನನ್ನು ಹೆತ್ತು ಭಾರತ ಮಾತೆಯ ಮಡಿಲಿಗೆ ಹಾಕಿದ್ದಾರೆ. ಯೋಧನ ಅಗಲಿಕೆಯಿಂದ ತಂದೆ ತಾಯಿಗೆ ಮಾತ್ರ ವಲ್ಲದೇ ನಮ್ಮೆಲ್ಲರಿಗೂ ಅತೀವ ದುಃಖವನ್ನು ತಂದಿದೆ. ತಂದೆ ತಾಯಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ನಿಮ್ಮೊಂದಿಗೆ ಸದಾ ನಾವೀರುತ್ತೇವೆ ಎಂದು ತಂದೆ ತಾಯಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

=================

Leave a Reply

You cannot copy content of this page