ಕಿರವತ್ತಿ ಭಾಗದಿಂದ ಯಲ್ಲಾಪುರ ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಅನುಕೂಲವಾಗುವಂತೇ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಆಗ್ರಹಿಸಿದ್ದಾರೆ.
ವಿಲ್ಸನ್ ಫರ್ನಾಂಡಿಸ್
ಈ ಕುರಿತು ಸೋಮವಾರ ಪ್ರಕಟಣೆ ನೀಡಿದ ಅವರು, ಕಿರವತ್ತಿ ಹಾಗೂ ಸುತ್ತಲಿನ ಭಾಗಗಳ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಯಲ್ಲಾಪುರ ಪಟ್ಟಣಕ್ಕೆ ಬರಲು ಬೆಳಿಗ್ಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುವ ಒಂದೆರಡು ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅದೂ ಅಲ್ಲದೇ ಈ ಬಸ್ಸುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದ್ದು, ಕಿರವತ್ತಿಯಲ್ಲಿ ಬಸ್ ಹತ್ತುವವರಿಗೆ ಸೀಟ್ ಸಿಗುವುದಿಲ್ಲ. ಬಸ್ಸಿನಲ್ಲಿ ನಿಂತುಕೊಂಡು ಹೋಗಲೂ ಆಗದ ಸ್ಥಿತಿ ಇದೆ. ಹೀಗಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಸ್ ಬಾಗಿಲಿನಲ್ಲಿಯೇ ಜೋತುಕೊಂಡು ಪ್ರಯಾಣಿಸುತ್ತಿದ್ದಾರೆ. ಇದರಿಂದ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ? ಎಂದು ವಿಲ್ಸನ್ ಫರ್ನಾಂಡಿಸ್ ಪ್ರಶ್ನಿಸಿದ್ದಾರೆ.
ಅಪಾಯಕಾರಿ ಪ್ರಯಾಣ ತಡೆಯಲಿ
ಕಿರವತ್ತಿಯಿಂದ ಯಲ್ಲಾಪುರದ ವರೆಗೆ ಬಸ್ಸುಗಳಲ್ಲಿ ಸೀಟ್ ಸಿಗದ ಕಾರಣ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ಜೋತುಕೊಂಡು ಪ್ರಯಾಣಿಸುತ್ತಿದ್ದಾರೆ. ಇದು ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ. ಬಸ್ ಬಾಗಿಲಿನಲ್ಲಿ ಜೋತುಕೊಂಡು ಪ್ರಯಾಣಿಸುವುದನ್ನು ಬಸ್ ಚಾಲಕ, ನಿರ್ವಾಹಕರು ತಡೆಯಬೇಕು, ಅವರಿಗೂ ಜವಾಬ್ದಾರಿ ಇದೆ. ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು, ಹಿರಿಯ ಅಧಿಕಾರಿಗಳು ಈಬಗ್ಗೆ ನಿಗಾ ವಹಿಸಬೇಕುಎಂದು ವಿಲ್ಸನ್ ಫರ್ನಾಂಡಿಸ್ ಆಗ್ರಹಿಸಿದ್ದಾರೆ.