ಜನ ಸೇವೆ ಮಾಡುವಾಗ ಜನರ ಮೇಲೆ ಪ್ರೀತಿ ಇರಬೇಕು. ಆಗ ನಾವು ಮಾಡುವ ಸೇವೆ ಸಾರ್ಥಕ ಎನ್ನಿಸುತ್ತದೆ, ಮಹಿಳೆ ಮನಸ್ಸು ಮಾಡಿದರೆ ಯಾವ ಕೆಲಸವನ್ನಾದರೂ ಮಾಡಬಹುದು. ಅಂತಹ ಸಾಮರ್ಥ್ಯ ಮಹಿಳೆಯರಿಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಶಿರಸಿ ತಾಲೂಕಿನ ಬಸಳೆ ಕೊಪ್ಪದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯಾವ ಖಾಯಿಲೆ ಬಂದರೂ ಅದನ್ನು ಗುಣಪಡಿಸಬಹುದು.ಆದರೆ ಬಡತನ ಎಂಬ ರೋಗ ಬಂದರೆ ಅದನ್ನು ಗುಣ ಪಡಿಸುವುದು ಬಹಳಕಷ್ಟ. ನಾವು ಸ್ವಾವಲಂಬಿಯಾಗಿ ಬದುಕಬೇಕು ಎಂದರೆ ಹೊಲಿಗೆ ಉದ್ಯೋಗ ಬಹಳ ಉಪಕಾರಿಯಾಗಲಿದೆ. ಅಡುಗೆ ಮತ್ತು ಹೊಲಿಗೆ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಉತ್ತಮವಾದ ದಾರಿಯಾಗಿದೆ. ನನ್ನ ದುಡಿಮೆಯ ಕೆಲ ಭಾಗವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದೇನೆ. ಒಂದು ತಿಂಗಳುಗಳ ಕಾಲ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರ ನಡೆಯಲಿದೆ. ಮಹಿಳೆಯರು ಉತ್ತಮವಾಗಿ ಕಲಿತರೆ ನಾವು ಮಾಡಿದ ಕೆಲಸಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ ಎಂದರು.
ದೊಡ್ನಳ್ಳಿ ಪಂಚಾಯಿತಿ ಪಿಡಿಓ ಪ್ರೀತಿ ಶೆಟ್ಟಿ ಮಾತನಾಡಿ, ಮಹಿಳೆಯರಿಗೆ ಸ್ವ ಉದ್ಯೋಗವನ್ನು ಕಲಿಸಬೇಕು ಎಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಅವರು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮೊದಲು ಮಹಿಳೆಯರಿಗೆ ಉದ್ಯೋಗ ಮಾಡಲು ಅವಕಾಶವೇ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಅವಕಾಶಗಳಿವೆ. ಉಳಿತಾಯದ ಸಮಯದಲ್ಲಿ ಉದ್ಯೋಗವನ್ನು ಮಾಡಿದರೆ ಕುಟುಂಬದ ಪರಿಸ್ಥಿತಿ ಉತ್ತಮವಾಗುತ್ತದೆ, ಉಚಿತ ಹೊಲಿಗೆ ತರಬೇತಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವನಜಾಕ್ಷಿ ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಮಾ ಆರೇರ, ರವಿ ಆರೇರ, ಮಾಬ್ಲೇಶ್ವರ ಭಂಡಾರಿ, ಚನ್ನಪ್ಪ , ಸದಾನಂದ ಆರೇರ , ಕೀರಣ ಆಚಾರಿ, ಚೇತನಾ, ಅನಂತಮೂರ್ತಿ ಹೆಗಡೆ ಅವರ ತಂದೆ ಮಾಬ್ಲೇಶ್ವರ ಹೆಗಡೆ, ತಾಯಿ ಶಾರದಾ ಹೆಗಡೆ ಸೇರಿದಂತೆ ಹಲವರು ಇದ್ದರು. ಶೀಲಾ ಹೆಬ್ಬಾರ ಹಾಗೂ ಚಂದ್ರಶೇಖರ ನಿರ್ವಹಿಸಿದರು.