ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಬೇಕು, ಸಂಘಟಿತ ಬಲದಿಂದ ಮಾತ್ರ ಧರ್ಮ ರಕ್ಷಣೆ ಸಾಧ್ಯ ಎಂದು ಖ್ಯಾತ ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.

ಅವರು ಯಲ್ಲಾಪುರ ಪಟ್ಟಣದ ರವೀಂದ್ರನಗರದ ಶಕ್ತಿ ಗಣಪತಿ ದೇವಾಲಯದಲ್ಲಿ ಶುಕ್ರವಾರ ಸಂಜೆ ಕಾರ್ತಿಕೋತ್ಸವ ಹಾಗೂ ಭಗವದ್ಗೀತಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿ, ಸಾವಿರಾರು ವರ್ಷಗಳಿಂದ ನಡೆದ ಪರಕೀಯರ ದಾಳಿಯಿಂದ 35 ಜನಾಂಗಗಳು ನಾಶವಾಗಿವೆ , ನೂರಾರು ಮತಗಳು ಕಣ್ಮರೆಯಾದವು, ಜ್ಞಾನ ಭಂಡಾರಗಳು ಕಳೆದುಹೊದವು, ಆದರೂ ನಮ್ಮ ಸನಾತನ ಧರ್ಮ ಜೀವಂತವಾಗಿದೆ. ನಮ್ಮ ಪರಂಪರೆ, ಸನಾತನ ಧರ್ಮ ಜೀವಂತವಾಗಿರಲು ನಾವು ಶತಮಾನಗಳಿಂದ ಪಾಲಿಸಿದ ಪೂಜೆ, ಪುನಸ್ಕಾರಗಳು ಕಾರಣವಾಗಿವೆ ಎಂದರು.


ನಮ್ಮ ಸಂಸ್ಕೃತಿ, ಧರ್ಮಾಚರಣೆ ಎಲ್ಲಿಯವರೆಗೆ ಇರುತ್ತವೋ ಅಲ್ಲಿಯವರೆಗೆ ಸನಾತನ ಧರ್ಮದ ಅಳಿವು ಸಾಧ್ಯವಿಲ್ಲ, ದೇಶದ ಅಂತಃ ಸತ್ವ ಉಳಿಯಲು, ಧರ್ಮ ರಕ್ಷಣೆ ಸಾಧ್ಯವಾಗಲು ದೈವಿ ಶಕ್ತಿ ಕಾರಣವಾಗಿದೆ, ನಮ್ಮ ಸನಾತನ ಜ್ಞಾನ ಪರಂಪರೆ ಭೋರ್ಗರೆಯುತ್ತಿದೆ, ಇಂತಹ ಜ್ಞಾನ ಗಂಗೆಯನ್ನು ಸ್ಪರ್ಷಿಸಿ ನಾವು ಪಾವನರಾಗಬೇಕು ಎಂದರು.

ನಮ್ಮ ಜಾತಿ ಯಾವುದೇ ಇರಲಿ, ಜಾತಿ ಮನೆಯಲ್ಲಿ ಸೀಮಿತವಾಗಿರಲಿ, ನಮ್ಮ ರಾಜಕೀಯ ಮನೆಯೊಳಗೆ ಸೀಮಿತವಾಗಿರಲಿ, ಇವುಗಳ ಹೊರತಾಗಿ ಮೊದಲು ನಾವು ಹಿಂದೂಗಳು ಎನ್ನಬೇಕು, ನಾವು ಒಂದಾಗಬೇಕು, ನಮ್ಮ ಮಕ್ಕಳಿಗೆ ಧರ್ಮ ಜಾಗೃತಿ ಮೂಡಿಸಬೇಕು, ನಮ್ಮ ಧರ್ಮದ ಶ್ರೇಷ್ಠತೆಯನ್ನು ಮಕ್ಕಳಿಗೆ ಪರಿಚಯಿಸಬೇಕು, ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು. ಸಂಸ್ಕಾರ ಕೊರತೆಯಿಂದ ಇಂದು ಅನೇಕ ಅಪಸವ್ಯಗಳು ನಡೆಯುತ್ತಿವೆ.

ನಮ್ಮ ಆಚರಣೆಗಳ ಬಗ್ಗೆ ಇಂದಿನ ಅನೇಕ ಮಕ್ಕಳಲ್ಲಿ, ಯುವ ಜನರಲ್ಲಿ ಕೀಳರಿಮೆ ಉಂಟಾಗುತ್ತಿದೆ, ಇದಕ್ಕೆ ನಾವು ಆಸ್ಪದ ನೀಡಬಾರದು, ನಮ್ಮ ಆಚರಣೆಗಳ ಶ್ರೇಷ್ಟತೆಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಿದರೆ ಮಾತ್ರ ರಾಷ್ಟ್ರ ಪರಂಪರೆ ಸುಭದ್ರವಾಗಿರಲು ಸಾಧ್ಯ ಎಂದರು.

ಭಗವಂತನೇ ಅರ್ಜುನನ ಮೂಲಕ ಜಗತ್ತಿಗೆ ನೀಡಿದ ಭಗವದ್ಗೀತೆ ಸರ್ವಶ್ರೇಷ್ಠ ಸಿದ್ದಾಂತ ಗ್ರಂಥವಾಗಿದ್ದು, ಭಗವದ್ಗೀತೆಯನ್ನು ಮಕ್ಕಳಿಗೆ ಕಲಿಸಬೇಕು, ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಬೇಕು, ಭಗವದ್ಗೀತೆಯ ತತ್ವ, ಸಂದೇಶಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು, ಇದು ಮಕ್ಕಳ ಶ್ರೇಯಸ್ಸಿಗೆ ಕಾರಣವಾಗುತ್ತದೆ : ಹಾರಿಕಾ ಮಂಜುನಾಥ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯಲ್ಲಾಪುರವು ಧರ್ಮ, ಸಂಸ್ಕಾರ, ಸಂಸ್ಕೃತಿಗಳ ತವರೂರಾಗಿದೆ. ನಮ್ಮ ಶ್ರೇಷ್ಠ ಸನಾತನ ಪರಂಪರೆ ಉಳಿಯಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು. ನಮ್ಮ ಧರ್ಮದ ನಿಜವಾದ ಸತ್ವವನ್ನು ಮರೆತು ಶತ,ಶತಮಾನಗಳಿಂದ ನಮಗೇ ನಾವು ಅನ್ಯಾಯ ಮಾಡಿಕೊಳ್ಳುತ್ತಿದ್ದೇವೆ, ಪರಕೀಯರ ದಾಳಿ, ಅನ್ಯಾಯವನ್ನು ಸಹಿಸಿಕೊಂಡು ಮೌಢ್ಯದಿಂದ ಮೈಮರೆಯುತಿದ್ದೇವೆ, ಇನ್ನಾದರೂ ಜಾಗೃತರಾಗಿ ನಮ್ಮ ಧರ್ಮ, ಸಂಸ್ಕೃತಿಗಳ ಅರಿವಾಗಬೇಕು, ಮುಂದಿನ ತಲೆಮಾರಿಗೆ ಉತ್ತಮ ಸಂಸ್ಕಾರ ಸಿಗಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಸಿದ ಶಿವಲಿಂಗಯ್ಯಾ ಅಲ್ಲಯ್ಯನಮಟ ಹಾಗೂ ಅಧ್ಯಕ್ಷತೆ ವಹಿಸಿದ್ದ ಡಾ. ಮಹೇಶ ಭಟ್ಟ ಮಾತನಾಡಿದರು.

ವೇದಿಕೆಯಲ್ಲಿ ಎಸ್.ಎಂ.ಭಟ್ಟ, ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ ಗಾಂವ್ಕಾರ್ ಕಂಚೀಪಾಲ ಮುಂತಾದವರು ಇದ್ದರು, ಸುಬ್ರಾಯ ಭಟ್ಟ ನಿರ್ವಹಿಸಿದರು. ಉಷಾ ಗಾಂವ್ಕಾರ್ ಸ್ವಾಗತಿಸಿದರು. ಗೀತಾ ಮಣಸೂಮನೆ ವಂದಿಸಿದರು.

=================

Leave a Reply

You cannot copy content of this page