





ರಾಷ್ಟ್ರೀಯ ಹೆದ್ದಾರಿಗಳನ್ನು ದುರಸ್ತಿಗೊಳಿಸಿ : ಸಂಸದ ಕಾಗೇರಿ ಸೂಚನೆ

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಗುಂಡಿಗಳನ್ನು ದುರಸ್ತಿಗೊಳಿಸಿ ಮತ್ತು ಬಾಕಿ ಇರುವ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಗೋಕರ್ಣ ಸೇರಿದಂತೆ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ದೂರುಗಳನ್ನು ನೀಡುತ್ತಿದ್ದು, ಕೂಡಲೇ ಈ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಿಆರ್ಫ್ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಅತ್ಯಂತ ಬ್ಯಾಡ್ ರೀಚ್ ಆಗಿರುವ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಬೇಕು. ಹೊನ್ನಾವರದ ಸೂಳೆಮುರ್ಕಿ ಕ್ರಾಸ್ ನಲ್ಲಿ ಅಪಘಾತಗಳಾದಂತೆ ಸುರಕ್ಷಾತಾ ಕ್ರಮಗಳನ್ನು ಕೈಗೊಳ್ಳಬೇಕು. ಹೊನ್ನಾವರದಲ್ಲಿ ಅವೈಜ್ಞಾನಿಕವಾಗಿ ಕಳಿಸಿರುವ ಡಿಪಿಆರ್ ರಿಜೆಕ್ಟ್ ಆಗಿದ್ದು, ಇದನ್ನು ಸರಿಪಡಿಸಿ ಪುನಃ ಕಳಿಸಬೇಕು, ಅಂಕೋಲಾದಲ್ಲಿ ಡಿಪಿಆರ್ ಅನುಮೋದನೆಯಾಗಿರುವ ಕಾಮಗಾರಿಗೆ ಶೀಘ್ರದಲ್ಲಿ ಟೆಂಡರ್ ಕರೆಯಬೇಕು. ಶಿರಸಿ-ಹಾವೇರಿ ರಸ್ತೆಯನ್ನು ಸೂಕ್ತ ರೀತಿಯಲ್ಲಿ ಸರ್ವೇ ಮಾಡಿಸಿ, ಸಮಸ್ಯೆ ಇಲ್ಲದ ಕಡೆ ಕಾಮಗಾರಿ ಆರಂಭಿಸಲು ಅನುಮತಿ ನೀಡಬೇಕು. ಗ್ರಾಮ ಸಡಕ್ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕೈಗೊಂಡಿರುವ ಜಲ ಜೀವನ ಮಿಷನ್ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಕಳಪೆ ಕಾಮಗಾರಿಗಳು, ಗ್ರೌಂಡ್ ರಿಯಾಲಿಟಿಗೂ ಕಾಮಗಾರಿಗೂ ವ್ಯತ್ಯಾಸ, ಪೈಪ್ ಲೈನ್ ಮುಕ್ತಾಯಗೊಂಡರೂ ನೀರು ಸರಬರಾಜು ಆಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ಬರಗಾಲದ ಈ ಸಮಯದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ಅತ್ಯಂತ ಅಗತ್ಯವಾಗಿದ್ದು, ಬಾಕಿ ಇರುವ ಸಣ್ಣ ಪುಟ್ಟ ದುರಸ್ಥಿ ಕಾಮಗಾರಿಗಳನ್ನು ಕೈಗೊಂಡು ನೀರು ಒದಗಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.
ಅಡಿಕೆ ಬೆಳಗಾರರಿಗೆ ದೋಟಿ ನೀಡುವಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಆದಷ್ಟು ಶೀಘ್ರದಲ್ಲಿ ಬಗೆಹರಿಸಲು ದಿಶಾ ಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದ ಸಂಸದರು, ಜಿಲ್ಲೆಯನ್ನು ಕಾಫಿ ಬೋರ್ಡ್ನಲ್ಲಿ ಸೇರಿಸಲು ತೋಟಗಾರಿಕೆ ಇಲಾಖೆಯ ಮೂಲಕ ಪತ್ರ ಬರೆಯುವಂತೆ ಮತ್ತು ಜಿಲ್ಲೆಯಲ್ಲಿ ಕಾಫಿ ಬೆಳೆಯುವ ಬಗ್ಗೆ ಉತ್ತೇಜನ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಯುವಜನತೆ ಗಾಂಜಾ ವ್ಯಸನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಇದು ಅತ್ಯಂತ ಮಾರಕವಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಮತ್ತಷ್ಟು ಕಠಿಣ ನಿಯಂತ್ರಣ ಕ್ರಮಗಗಳನ್ನು ಕೈಗೊಳ್ಳಬೇಕು, ಪ್ರೌಢ ಶಿಕ್ಷಣ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸುವಂತೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರೋಗ್ಯ ಕೆಂದ್ರಗಳಲ್ಲಿ ವೈದ್ಯ ಕೊರತೆಯಿಂದ ಸಾರ್ವಜನಿಕರು ದುಬಾರಿ ಶುಲ್ಕ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಾಗಬಾರದು, ಸಿದ್ದಾಪುರ ಸೇರಿದಂತೆ ಜಿಲ್ಲೆಯ ವಿವಿಧ ಆರೋಗ್ಯ ಕೆಂದ್ರಗಳಲ್ಲಿ ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಭಾರತೀಯ ಜನೌಷಧ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಅಗತ್ಯ ಪ್ರಮುಖ ಔಷಧಗಳು ದೊರೆಯುವಂತೆ ಮಾಡಬೇಕು, ಟಿಬಿ ಮುಕ್ತ ಭಾರತ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಬೇಕು, ಆಯುಷ್ಮಾನ್ ವಯೋ ವಂದನಾ ಕಾರ್ಡ್ ನ ಪ್ರಯೋಜನಗಳ ಬಗ್ಗೆ ಸಾರ್ವಜನಿಕ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಚ್ಚಿನ ಅರಿವು ಮೂಡಿಸಿ, ನೋಂದಣಿ ಮಾಡಿಸಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳ ಪ್ರಯೋಜನ ಒದಗಿಸಬೇಕು ಎಂದರು.
ಜಿಲ್ಲೆಯಲ್ಲಿ ರೇಷ್ಮೆ ಬೆಳಗೆ ಹೆಚ್ಚಿನ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಬೇಕು. ಪಶುಪಾಲನೆ ಇಲಾಖೆಯಿಂದ ಜಾನುವಾರುಗಳಿಗೆ ತಗುಲಿರುವ ಚರ್ಮಗಂಟು ರೋಗವನ್ನು ನಿಯಂತ್ರಿಸಬೇಕು. ಹಂದಿ ಸಾಕಾಣಿಕೆಗೆ ಉತ್ತೇಜನ ನೀಡಬೇಕು. ಗೋಶಾಲೆಗಳಲ್ಲಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವ ಮೂಲಕ ಬರಗಾಲ ಸಂದರ್ಭದಲ್ಲಿ ಅವುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಶೇಖರಗೊಂಡಿರುವ ತ್ಯಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಶೇಖರಗೊಳ್ಳುವ ತ್ಯಾಜ್ಯವನ್ನು ಸೂಕ್ತರೀತಿಯಲ್ಲಿ ವಿಲೇವಾರಿ ಮಾಡಬೇಕು. ಕಾರವಾರದ ಫ್ಲೈ ಒವರ್ ಕೆಳಗಿನ ತ್ಯಾಜ್ಯ ಮತ್ತು ಬೀಚ್ ನಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದರು.
ಅಂಚೆ ಕಚೇರಿಗಳಲ್ಲಿನ ಕಾರ್ಯನಿರ್ವಹಣೆ ಕುರಿತಂತೆ ಸಾರ್ವಜನಿಕರಿಂದÀ ಯಾವುದೇ ದೂರುಗಳ ಬಾರದಂತೆ ಕರ್ತವ್ಯ ನಿರ್ವಹಿಸಬೇಕು. ಬಿ.ಎಸ್.ಎನ್.ಎಲ್. ಟವರ್ ಗಳಿಗೆ ಅಗತ್ಯವಿರುವೆಡೆ ಆದ್ಯತೆಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದರು. ವಿವಿಧ ಇಲಾಖೆಗಳು ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಅನುಮತಿಗಳ ಬಗ್ಗೆ ಪತ್ರ ಬರೆದಿದಲ್ಲಿ ಅದರ ಪ್ರತಿಯನ್ನು ನೀಡಿದ್ದಲ್ಲಿ ಅವುಗಳ ಬಗ್ಗೆ ಕೇಂದ್ರದಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಸಂಸದರು, ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯಶಸ್ವಿ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಪ್ರಚಾರವನ್ನು ಕೈಗೊಂಡು ಸಾರ್ವಜನಕರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಒದಗಿಸಿ ಅವರನ್ನು ಕಚೇರಿಗೆ ಪದೇ ಪದೇ ಅಲೆದಾಡಿಸದೇ ಶೀಘ್ರದಲ್ಲಿ ಸೌಲಬ್ಯಗಳನ್ನು ಒದಗಿಸಿ ಮತ್ತು ತಮಗೆ ನೀಡಿರುವ ಗುರಿಗಳಲ್ಲಿ ಸಂಪೂರ್ಣ ಪ್ರಗತಿ ಸಾಧಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಬೊಯರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್ ಮರಿಯಪ್ಪ, ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

=================















