ಯಲ್ಲಾಪುರ: ಪುರೋಹಿತರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ
ಯಲ್ಲಾಪುರ ತಾಲೂಕಿನ ಹೊನ್ನಗದ್ದೆ ಸಮೀಪದ ಗಿಡಗಾರಿಮನೆಯ ಪುರೋಹಿತ, ಪ್ರಸ್ತುತ ಯಲ್ಲಾಪುರ ಪಟ್ಟಣದಲ್ಲಿ ನೆಲೆಸಿರುವ, ಗಿರೀಶ ಶಂಕರ ಭಟ್ಟ ಅವರ ಮೂಲಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಬೇಧಿಸಿದ್ದಾರೆ. ಕಳ್ಳತನ ಮಾಡಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದಾನೆ.
ಸೆ.3ರ ಸಾಯಂಕಾಲ 5 ಗಂಟೆಯಿಂದ ನ.1ರ ಮಧ್ಯಾಹ್ನ 3.30 ಗಂಟೆಯ ನಡುವಿನ ಅವಧಿಯಲ್ಲಿ ಗಿರೀಶ ಶಂಕರ ಭಟ್ಟ ಅವರ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, 83,500 ರೂ ಮೌಲ್ಯದ ತಾಮ್ರ, ಹಿತ್ತಾಳೆ ಪಾತ್ರೆಗಳನ್ನು ಹಾಗೂ ಇನ್ನಿತರ ಸ್ವತ್ತುಗಳನ್ನು ಕಳ್ಳತನ ಮಾಡಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಯಲ್ಲಾಪುರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಆರೋಪಿಗಳನ್ನು ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿಯ ಮೊಡಕಾ ವ್ಯಾಪಾರಿ 21 ವರ್ಷದ ದಿಲೀಪ್ ತಂದೆ ರಾಜೇಶ ಗೋಸಾವಿ ಹಾಗೂ ಮುಂಡಗೋಡ ತಾಲೂಕಿನ ಬಸವನಗರ ಚೌಡಳ್ಳಿ ಪ್ಲಾಟ್ ನ ನಿವಾಸಿ 42 ವರ್ಷದ ಗುಜರಿ ವ್ಯಾಪಾರಿ ಕುಮಾರ ತಂದೆ ಬಾಲು ಪಡಿಯಾರ ಎಂದು ಗುರುತಿಸಲಾಗಿದೆ. ಇವರಲ್ಲಿ ದಿಲೀಪ್ ತಂದೆ ರಾಜೇಶ ಗೋಸಾವಿ ತಲೆ ಮರೆಸಿಕೊಂಡಿದ್ದು, ಕುಮಾರ ಪಡಿಯಾರನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕಳ್ಳತನ ಮಾಡಲಾದ 25,000 ಮೌಲ್ಯದ ಪಾತ್ರೆಗಳನ್ನು, ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹಿರಿಯ ಪೊಲಿಸ್ ಅಧಿಕಾರಿಗಳ ಹಾಗೂ ಯಲ್ಲಾಪುರ ಸಿಪಿಐ ಸುರೇಶ ಕುಂಬಾರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಸೈಗಳಾದ ರಾಜೇಶ ವಂದಲಿ, ಗಣಪತಿ ಶೇರುಗಾರ, ಮಹಾವೀರ ಕಾಂಬ್ಳೆ, ಪೊಲೀಸ್ ಸಿಬ್ಬಂದಿಗಳಾದ ಗೋಪಾಲ ಚೌಹ್ಹಾಣ, ಸಂತೋಷ ಬಾಳೆರ, ಬಸವರಾಜ ಡಿ.ಕೆ, ಮಾರುತಿ, ಪರಮೇಶ್ವರ ಎ, ರೇಖಾ ಎಂ.ಎಸ್ ಮುಂತಾದವರು ಪಾಲ್ಗೊಂಡಿದ್ದರು.