ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು, ಇನ್ನೊಂದು ಲಾರಿಗೆ ಡಿಕ್ಕಿಯಾದ ಪರಿಣಾಮ ಓರ್ವ ಲಾರಿ ಚಾಲಕ ಮೃತಪಟ್ಟು, ಇಬ್ಬರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಗಣಪತಿಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ನಡೆದಿದೆ.

ಮಧ್ಯಪ್ರದೇಶ ರಾಜ್ಯದ ಮನಸಾ ತಾಲೂಕಿನ ನಿಮುಚದ ಗ್ರಾಮದ ನಿವಾಸಿ, ಲಾರಿ ಚಾಲಕ ಜಾವೇದ್ ಖಾನ್ ತಂದೆ ರಶೀದ್ ಖಾನೆ ತನ್ನ ಲಾರಿಯಲ್ಲಿ ಗೋಡಂಬಿ ತುಂಬಿಕೊಂಡು ಮಂಗಳೂರಿನಿಂದ ಹುಬ್ಬಳ್ಳಿಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ, ಅರಬೈಲ್ ಘಟ್ಟದ ತಿರುವಿನಲ್ಲಿ ಎದುರು ಬದಿಯಿಂದ, ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ವೇಗವಾಗಿ ಚಲಾಯಿಸಿಕೊಂಡುಹೋಗುತ್ತಿದ್ದ ಲಾರಿಯು ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ವೇಗವಾಗಿ ಹೋಗಿ ಡಿಕ್ಕಿಹೊಡೆದ ಲಾರಿಯ ಚಾಲಕ ಧಾರವಾಡದ ಮಂಜುನಾಥ ಗಡ್ಡಿ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕ ಜಾವೇದ್ ಖಾನ್ ಹಾಗೂ ಲಾರಿಯ ಮಾಲೀಕ ಪ್ರಕಾಶ ಮೀನಾ ಅವರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

=================

Leave a Reply

You cannot copy content of this page