ನಮ್ಮ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿ, ಪರಂಪರೆ ಬಹಳ ಶ್ರೇಷ್ಠವಾದದ್ದು, ಇವುಗಳ ಮಹತ್ವವನ್ನು ಅರಿತು, ನಾವು ನಮ್ಮ ಜೀವನದಲ್ಲಿ ನಿರಂತರವಾಗಿ ಧರ್ಮಾಚರಣೆಯನ್ನು ಅನುಸರಿಸಬೇಕು ಎಂದು ಧಾರವಾಡದ ಶ್ರೀ ಸಂಸ್ಥಾನ ದ್ವಾರಪುರದ ಶ್ರೀ ಪರಮಾತ್ಮಾಜಿ ಮಹಾರಾಜ ಹೇಳಿದರು.

ಯಲ್ಲಾಪುರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಾಲಯದಲ್ಲಿ ಶುಕ್ರವಾರ ಸಂಜೆ ನಡೆದ 13ನೇ ವರ್ಷದ ಕಾರ್ತಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ವಸ್ತುವಿನಲ್ಲಿಯೂ ಪರಮ ಚೈತನ್ಯವಿದೆ, ಎಲ್ಲೆಡೆ ಭಗವಂತನ ಸಾನ್ನಿಧ್ಯ ಇದೆ ಎಂಬ ಮಹೋನ್ನತ ಚಿಂತನೆ, ನಂಬಿಕೆ ನಮ್ಮ ಧರ್ಮದಲ್ಲಿದೆ, ಧರ್ಮ ಎನ್ನುವುದು ಒಂದುಬಾರಿ ಆಚರಿಸಿ ಬಿಡುವುದಲ್ಲ.

ಧರ್ಮಾಚರಣೆಯನ್ನು ನಮ್ಮ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು, ಧರ್ಮದ ನಿಜವಾದ ಅರ್ಥ ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು, ಧರ್ಮದ ಅರ್ಥ ತಿಳಿಯದಿದ್ದರೆ ಅಪಸವ್ಯಗಳಾಗುತ್ತವೆ, ಧರ್ಮವನ್ನು ನಾವು ಉಳಿಸಿದರೆ ಧರ್ಮ ನಮ್ಮನ್ನು ಉಳಿಸುತ್ತದೆ ಎಂದ ಅವರು, ಧರ್ಮವನ್ನು ಅರ್ಥೈಸಿಕೊಳ್ಳಲು ನಾವು ಎಡವಿದ್ದೇವೆ, ಇದರಿಂದ ಅನೇಕ ತಪ್ಪುಗಳು ಸಂಭವಿಸುತ್ತಿವೆ, ಪರ ಹಿತ, ನೆಮ್ಮದಿ, ಜೊತೆಗೆ ಸಮಾಜದ ಹಿತ ಮತ್ತು ಸಮಷ್ಟಿಯ ಚಿಂತನೆ ನಮಗಿರಬೇಕು, ಸರಿಯಾದ ಧರ್ಮ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾಂಸ ಹಿರಣ್ಯ ವೆಂಕಟೇಶ ಭಟ್ಟ, ಉದ್ಯಮಿ ಎಮ್.ಎಲ್.ಹೆಗಡೆ, ಹಿರಿಯ ವಕೀಲ ಜಿ.ಎಸ್.ಭಟ್ಟ ಹಳವಳ್ಳಿ, ಭಗವದ್ಗೀತಾ ಅಭಿಯಾನ ಸಮೀತಿಯ ತಾಲೂಕಾ ಅಧ್ಯಕ್ಷ, ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಕ್ತಿ ಗಣಪತಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ ಗಾಂವ್ಕರ ಕಂಚೀಪಾಲ ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು. ಶಿಕ್ಷಕ ಸುಬ್ರಾಯ ಭಟ್ಟ ನಿರ್ವಹಿಸಿದರು. ಸಿ.ಎಸ್.ಹೆಗಡೆ ಸ್ವಾಗತಿಸಿದರು. ಉಷಾ ಗಾಂವ್ಕರ ವಂದಿಸಿದರು.

=================

Leave a Reply

You cannot copy content of this page