ಕೂಲಿ ಕೆಲಸದ ಹಣ ಕೇಳಿದ್ದಕ್ಕೆ ಏರ್ ಗನ್ ನಿಂದ ಶೂಟ್: ಕೃಷಿಕನ ವಿರುದ್ಧ ದೂರು
ಅಡಿಕೆ ತೋಟದಲ್ಲಿ ಕೂಲಿ ಕೆಲಸ ಮಾಡಿದ ಹಣವನ್ನು ಕೇಳಿದ್ದಕ್ಕೆ ಸಿಟ್ಟಾದ ಕೃಷಿಕನೊಬ್ಬ ಕೂಲಿ ಕೆಲಸಗಾರನ ಮೇಲೆ ಏರ್ ಗನ್ ನಿಂದ ಗುಂಡುಹೊಡೆದ ಪರಿಣಾಮ ಕೂಲಿ ಕೆಲಸಗಾರನಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ.
ಈ ಕುರಿತು ಕೂಲಿ ಕೆಲಸಗಾರ ಗುಳ್ಳಾಪುರದ ನಾಗರಾಜ ಮನೋಹರ ಬಾಂದೇಕರ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾಖಲಾದ ದೂರಿನ ಪ್ರಕಾರ, ಕೂಲಿ ಕೆಲಸಗಾರ ನಾಗರಾಜ ಬಾಂದೇಕರ್ (41) ಅವರು ಗುಳ್ಳಾಪುರದ ಸುಬ್ರಹ್ಮಣ್ಯ ತಂದೆ ಮಹಾದೇವ ಗಾಂವ್ಕಾರ್ ಇವರ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಮೂರು ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದ ಕೂಲಿ ಹಣವನ್ನು ಕೇಳಲು ನಾಗರಾಜ ಅವರು ಶನಿವಾರ ಸುಬ್ರಹ್ಮಣ್ಯ ಗಾಂವ್ಕಾರ್ ಅವರ ಮನೆಗೆ ಹೋಗಿದ್ದಾರೆ. ಆಗ ಸಿಟ್ಟುಗೊಂಡ ಸುಬ್ರಹ್ಮಣ್ಯ ಗಾಂವ್ಕಾರ್ ಅವರು, ನಾಗರಾಜ ಅವರನ್ನು ಉದ್ದೇಶಿಸಿ, ನೀನು ಅಡಿಕೆ ತೋಟದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ, ನಿನಗೆ ಹಣ ಕೊಡುವುದಿಲ್ಲ ಹೋಗು ಎಂದು ಬೈದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಯಾಕೆ ನನಗೆ ಬೈಯ್ಯುತ್ತಿದ್ದೀರಾ ಎಂದು ನಾಗರಾಜ ಪ್ರಶ್ನಿಸಿದಾಗ ಆರೋಪಿ ಸುಬ್ರಹ್ಮಣ್ಯ ಗಾಂವ್ಕಾರ್ ಕೋಪಗೊಂಡು, ನಿನ್ನನ್ನು ಕೊಲೆ ಮಾಡಿಬಿಡುತ್ತೇನೆ ಎಂದುಹೇಳಿ, ತನ್ನ ಬಳಿ ಇದ್ದ ಏರ್ ಗನ್ ನಿಂದ ನಾಗರಾಜನ ಹಣೆಗೆ ಶೂಟ್ ಮಾಡಿದಾಗ, ನಾಗರಾಜ ತಪ್ಪಿಸಿಕೊಂಡಿದ್ದು, ಗುಂಡು ನಾಗರಾಜನ ಎಡಗೈ ಹಸ್ತಕ್ಕೆ ತಗುಲಿ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಾಗರಾಜ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸುಬ್ರಹ್ಮಣ್ಯ ಗಾಂವ್ಕಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕುರಿತು ಪಿಎಸ್ಸೈ ರಾಜಶೇಖರ ವಂದಲಿ ತನಿಖೆ ಕೈಗೊಂಡಿದ್ದಾರೆ