
























30-9-2023. ಶನಿವಾರ, ಯಲ್ಲಾಪುರ
ಯಲ್ಲಾಪುರದಲ್ಲಿ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ :
ಕೃಷ್ಣವೇಷ ಸ್ಪರ್ಧೆಯು ಸಂಸ್ಕಾರದ ಜೊತೆಗೆ ಸಾಮರಸ್ಯ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ : ಶಿವರಾಮ ಹೆಬ್ಬಾರ್

ಇ-ಯಲ್ಲಾಪುರ ಡಿಜಿಟಲ್ ನ್ಯೂಸ್
ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆಯಂತಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಸಂಸ್ಕಾರದ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಸಹಕಾರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.


ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಹ್ಯಾಂಗ್ಯೋ ಐಸ್‍ಕ್ರೀಂ, ಟಿ.ಎಸ್.ಎಸ್ ಮತ್ತು ಗೌತಮ್ ಜುವೆಲ್ಲರ್ಸ್ ಇವರ ಸಹಯೋಗದಲ್ಲಿ ಯಲ್ಲಾಪುರದ ಸುಜ್ಞಾನ ಸೇವಾ ಪೌಂಡೇಶನ್ ಹಮ್ಮಿಕೊಂಡ ಜಿಲ್ಲಾಮಟ್ಟದ ಕೃಷ್ಣವೇಷ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಹಾಗೂ ನೃತ್ಯ ವೈಭವ, ಗಾನವೈಭವ ಮತ್ತು ಪ್ರತಿಷ್ಠಿತ ಸುಜ್ಞಾನ ಸೇವಾ ಪ್ರಶಸ್ತಿ, ಸುಜ್ಞಾನ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಒಳಗೊಂಡ ಶ್ರೀಕೃಷ್ಣಾರ್ಪಣಂ ಸಮಾರಂಭವನ್ನು ಉದ್ಘಾಟಿಸಿ, ಬಹುಮಾನ ವಿತರಿಸಿ ಮಾತನಾಡಿದರು.
ಇದನ್ನೂ ಓದಿ: ಶ್ರೀಕೃಷ್ಣಾರ್ಪಣಂ ಸಮಾರಂಭದಲ್ಲಿ ವೈವಿಧ್ಯಮಯ ಕಾರ್ಯಕ್ರಮ, ಮನಸೆಳೆದ ನೃತ್ಯ ವೈಭವ, ಗಾನಸುಧೆ



ಇಂತಹ ಸ್ಪರ್ಧೆಗಳು ಹೊಸತನವನ್ನು ಮೂಡಿಸುತ್ತವೆ. ಸುಜ್ಞಾನ ಫೌಂಡೇಶನ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ಸಂಘಟಿಸಿರುವುದು ಮಾದರಿಯ ಕೆಲಸವಾಗಿದೆ. ಸುಜ್ಞಾನ ಪೌಂಡೇಷನ್ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಪ್ರಥಮ,ದ್ವಿತೀಯ,ತೃತೀಯ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಬೆಳ್ಳಿಯ ಪಾರಿತೋಷಕ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಹತ್ತು ಸಮಾಧಾನಕರ ಬಹುಮಾನ ವಿಜೇತರಿಗೆ ಬೆಳ್ಳಿಯ ಪಾರಿತೋಷಕ,ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.


ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಮಾತನಾಡಿ, ಸನಾತನ ಧರ್ಮದ ಸತ್ವಯುತ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹವಾಗಿದೆ. ಇಂತಹ ಮಾದರಿ ಕೆಲಸಗಳು ಇನ್ನೂ ಹೆಚ್ಚಾಗಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಪ್ರತಿ ನಿತ್ಯ ಸಾವಿರಾರು ಓದುಗರನ್ನು ತಲುಪುತ್ತಿರುವ, ಮುಂಚೂಣಿ ಮಾಧ್ಯಮವಾದ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಹಾಗೂ ಸುಜ್ಞಾನ್ ಫೌಂಡೇಶನ್ ವಿವಿಧ ಸಂಘಟನೆಗಳೊಂದಿಗೆ ಸೇರಿಕೊಂಡು ಹಲವು ವರ್ಷದಿಂದ ಕೃಷ್ಣ ವೇಷದ ಸ್ಪರ್ಧೆ ಏರ್ಪಡಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಹೊರ ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ. ನಮ್ಮ ಕೋರಿಕೆಗೆ ಜಿಲ್ಲೆ ಎಲ್ಲ ತಾಲೂಕುಗಳಿಂದ ಪಾಲಕರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.



ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಪ್ರಶಾಂತ ಸಭಾಹಿತ ಮಾತನಾಡಿ, ಜಿ.ಎನ್.ಭಟ್ ತಟ್ಟಿಗದ್ದೆಯವ ನೇತ್ರತ್ವದಲ್ಲಿ ಸುಜ್ಞಾನ್ ಫೌಂಡೇಶನ್ ಮಾಡುತ್ತಿರುವ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು. . ಸ್ಪರ್ಧಾ ನಿರ್ಣಾಯಕರ ಪರವಾಗಿ ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಜಿ.ಎಸ್.ಗಾಂವ್ಕರ್ ಸಾಂದರ್ಭಿಕವಾಗಿ ಮಾತನಾಡಿದರು. ಮತ್ತೊಬ್ಬ ನಿರ್ಣಾಯಕ ಗಣೇಶ ಪತ್ತಾರ ಉಪಸ್ಥಿತರಿದ್ದರು

ನಾಟಿ ವೈದ್ಯ ನಾರಾಯಣ ಹೆಗಡೆ ಗವೇಗುಳಿಯವರಿಗೆ ಸುಜ್ಞಾನ ಶ್ರೀ ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯನವರಮಠ ಇವರಿಗೆ ಸುಜ್ಞಾನ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ಈ ಸಂದರ್ಭದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ, ಗೌತಮ್ ಜುವೆಲ್ಲರ್ಸ್ ನ ಪ್ರಕಾಶ ಶೇಟ್, ಶಮಾ ಭಾರತ್ ಗ್ಯಾಸ್ ಮಾಲೀಕ ಎ.ಎ.ಶೇಖ್, ಸಂಘಟನೆಯ ಲಲಿತಾ ಭಟ್ ಮತ್ತಿತರರು ಇದ್ದರು. ಗಾಯತ್ರಿ ಬೋಳಗುಡ್ಡೆ ಪ್ರಾರ್ಥಿಸಿದರು. ಸುಜ್ಞಾನ ಸೇವಾ ಪೌಂಡೇಶನ್ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಶ್ರೀಧರ ಅಣಲಗಾರ ನಿರ್ವಹಿಸಿದರು. ಶಿಕ್ಷಕ ಸುಧಾಕರ ನಾಯಕ ವಂದಿಸಿದರು.
ಶ್ರೀಕೃಷ್ಣ ಗಾನಾಮೃತ ಹಾಗೂ ಶ್ರೀಕೃಷ್ಣ ನೃತ್ಯಾಮೃತ ಕಾರ್ಯಕ್ರಮಗಳು ನಡೆದವು





LATEST NEWS

























