





ಸಂಸದ ಕಾಗೇರಿಯವರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಲೋಕಸಭೆಯ ಅಧಿವೇಶನದಲ್ಲಿ ಪ್ರದರ್ಶಿಸಲಿ: ಶಾಸಕ ಹೆಬ್ಬಾರ್

ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ನಿರಾಕರಣೆ ಮತ್ತು ಇ-ಸ್ವತ್ತು 2.0 ತಂತ್ರಾಂಶದಿಂದ ಆಸ್ತಿಗಳನ್ನು ಕೈಬಿಡುವ ಕುರಿತು ಕಳೆದ ಆಗಸ್ಟ್ 13ರಂದು ಹೊರಡಿಸಲಾಗಿದ್ದ ಸುತ್ತೋಲೆಗೆ ತಡೆ ನೀಡಿರುವುದನ್ನು ಕೇವಲ ಕಣ್ಣೊರೆಸುವ ತಂತ್ರ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿರುವ ಹೇಳಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ಖಂಡಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ಶಿವರಾಮ ಹೆಬ್ಬಾರ್ ಅವರು, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಆದೇಶದಿಂದ ಜನತೆಗೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕಾನೂನು ರೂಪಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮನೆಯ ಹಕ್ಕಿನ ಬಗ್ಗೆ ಮಾತನಾಡುವ ಸಂಸದ ಕಾಗೇರಿ ಅವರು ಬಡ ಮತದಾರರ ಹಕ್ಕುಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂಬುದನ್ನು ಪ್ರಶ್ನಿಸಬೇಕಾಗಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಜನತೆಗೆ ತೊಂದರೆ ಉಂಟುಮಾಡುತ್ತಿರುವ ತೆರಿಗೆ ಸಂಗ್ರಹದ ಆದೇಶಕ್ಕೆ ಸೂಕ್ತ ಕಾನೂನು ರೂಪಿಸುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಕಾಗೇರಿ ಅವರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಲೋಕಸಭೆಯ ಅಧಿವೇಶನದಲ್ಲಿ ಪ್ರದರ್ಶಿಸಲಿ. ಅತಿಕ್ರಮಣದಾರರಿಗೆ ಭೂಮಿ ಮಂಜೂರು ಮಾಡಲು ಸಂಬಂಧಿಸಿದಂತೆ ಮೂರು ತಲೆಮಾರುಗಳ ಆಸ್ತಿ ವಾರಸುದಾರಿಕೆಯ ಮಾನದಂಡವನ್ನು ಒಂದು ತಲೆಮಾರಿಗೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾನೂನು ತಿದ್ದುಪಡಿಗೆ ಪ್ರಯತ್ನಿಸಲಿ. ಆಗ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ನಂಬಲು ಸಾಧ್ಯ ಎಂದು ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿನಿತ್ಯ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿರುವ ಆರೋಪ ಮಾಡುವ ಕಾಗೇರಿ ಅವರು, ನಮ್ಮ ಪ್ರಯತ್ನವನ್ನೂ ಕಣ್ಣೊರೆಸುವ ತಂತ್ರ ಎಂದು ಟೀಕಿಸುತ್ತಿರುವುದು ವಿಪರ್ಯಾಸ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿ ವಾಸಿಸುತ್ತಿರುವ ಜನರಿಗೆ ಯಾವುದೇ ತೊಂದರೆಯಾಗದಂತೆ, ಅವರ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿ ಕಾನೂನು ತಿದ್ದುಪಡಿ ತಂದು ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೇಸ ಪಕ್ಷದ ಮುಖಂಡರು ಹಾಗೂ ಹೋರಾಟಗಾರರಾದ ರವೀಂದ್ರ ನಾಯ್ಕ ಅವರು ಕೂಡ ಈ ಆದೇಶಕ್ಕೆ ತಾತ್ಕಾಲಿಕ ತಡೆ ನೀಡುವುದಷ್ಟೇ ಸಾಕಾಗುವುದಿಲ್ಲ; ಬದಲಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವಿಚಾರವನ್ನು ಶಾಸಕನಾಗಿ ನಾನು ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದೇವೆ. ಜನರಿಗೆ ತೊಂದರೆಯಾಗದಂತೆ ಅಗತ್ಯ ಕಾನೂನು ರೂಪಿಸಿ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಹೋರಾಟಗಾರರಾದ ರವೀಂದ್ರ ನಾಯ್ಕ ಅವರು ಸಂಸದರಾದ ಕಾಗೇರಿ ಅವರಿಗೆ ಬಡ ಮತದಾರರ ಮತದ ಹಕ್ಕನ್ನು ಕಾಪಾಡುವ ನಿಟ್ಟಿನಲ್ಲಿ ಹೋರಾಟ ಮಾಡಲು ಹಾಗೂ ಅತಿಕ್ರಮಣ ಭೂಮಿ ಮಂಜೂರಾತಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಣೆಗಾಗ ಲೋಕಸಭೆಯಲ್ಲಿ ಕಾನೂನು ತಿದ್ದುಪಡಿಗಾಗಿ ಧ್ವನಿ ಎತ್ತುವಂತೆ ಹೇಳಿ.
ಕೇಂದ್ರ ಸರ್ಕಾರದ ಮಟ್ಟದಲ್ಲಿ ಅವರು ಪ್ರಯತ್ನಿಸಲಿ; ರಾಜ್ಯ ಸರ್ಕಾರದ ಮಟ್ಟದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಇಬ್ಬರೂ ಒಟ್ಟಾಗಿ ಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ತಿಳಿಸಿದ್ದಾರೆ.

===============














