ರಾಷ್ಟ್ರಪಿತ ಗಾಂಧೀಜಿಯವರ ಕನಸ್ಸಿನಂತೆ ಪರಿಸರವನ್ನು ಸ್ವಚ್ಛವಾಗಿಡುವುದರಿಂದ ಆರೋಗ್ಯಕರ ಜೀವನವನ್ನು ಸಾಗಿಸಬಹುದು, ಸರ್ಕಾರ ಇಡೀ ರಾಜ್ಯಾದ್ಯಂತ ವಿನೂತನವಾಗಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಥಮವಾಗಿ ಹಳಿಯಾಳ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಅವರು ಮಂಗಳವಾರ ದಾಂಡೇಯ ಚೆನ್ನಮ್ಮ ವೃತ್ತದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 3 ದಿನಗಳ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಾಂಡೇಲಿ ಕೈಗಾರಿಕ ನಗರವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿನ ರೆಸಾರ್ಟ್, ರಸ್ತೆ, ಬಸ್ ನಿಲ್ದಾಣ, ಚರಂಡಿ ಉದ್ಯಾನವನಗಳು ಸೇರಿದಂತೆ ದಾಂಡೇಯ ಎಲ್ಲಾ ಭಾಗದಲ್ಲಿ ಸ್ವಚ್ಛವಾಗಿರಬೇಕು. ಅಂಗಡಿ ಮಾಲೀಕರು ಮತ್ತು ವ್ಯಾಪಾರಸ್ಥರು ತಮ್ಮ ಸುತ್ತ ಮತ್ತಲಿನಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂ ಪ್ರೇರಣೆಯಿಂದ ಎಲ್ಲರೂ ಪಾಲ್ಗೋಳುವ ಮೂಲಕ ಕ್ಷೇತ್ರವನ್ನು ಕಸ ಮುಕ್ತ ತಾಲೂಕು ಮಾಡಲು ಕೈ ಜೋಡಿಸಬೇಕು ಎಂದರು.
ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ರೀತಿಯ ಕಾರ್ಯಕ್ರಮವನ್ನು ರಾಜ್ಯದಲ್ಲಿ ಒಂದು ತಿಂಗಳ ಆಯೋಜನೆ ಮಾಡುವುದರಿಂದ ಇಡೀ ರಾಜ್ಯ ಸ್ವಚ್ಛವಾಗಿರುತ್ತದೆ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಉತ್ತಮ ಆರೋಗ್ಯ ಮತ್ತು ಉತ್ತಮ ಪರಿಸರವನ್ನು ರೂಪಿಸಲು ಸಾಧ್ಯ ಎಂದರು.
ನಗರ ಸಭೆ ಪೌರಾಯುಕ್ತ ವಿವೇಕ ಬನ್ನೇ ಮಾತನಾಡಿ, ದಾಂಡೇಲಿಯ 31 ವಾರ್ಡ್‍ಗಳಲ್ಲಿ ಏಕ ಕಾಲದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ನಗರದ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ತಮ್ಮ ಅಂಗಡಿ ಮತ್ತು ಮನೆಯಲ್ಲಿ ಕಸದ ಬುಟ್ಟಿಯನ್ನು ಕಡ್ಡಾಯವಾಗಿ ಇಡಬೇಕು ಹಾಗೂ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ನಗರಸಭೆಯ ಸ್ವಚ್ಛತಾ ವಾಹನಕ್ಕೆ ನೀಡುವ ಮೂಲಕ ದಾಂಡೇಲಿ ನಗರವನ್ನು ಕಸ ಮುಕ್ತ ನಗರವನ್ನಾಗಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಝಹೀರ್ ಅಬ್ಬಾಸ್, ತಹಶೀಲ್ದಾರ್ ಶೈಲೇಶ್ ಪರಮಾನಂದ, ಎಸಿಎಫ್ ಸಂತೋಷ ಚವ್ಹಾಣ್, ವಿವಿಧ ಸ್ವಸಹಾಯ ಸಂಘದ ಪದಾಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು, ಮತ್ತಿತ್ತರರು ಇದ್ದರು.