




ಎ.8 ರಿಂದ ಆನಗೋಡ ಗೋಪಾಲಕೃಷ್ಣ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವ: ಗಣಪತಿ ಮಾನಿಗದ್ದೆ

ಯಲ್ಲಾಪುರ ತಾಲೂಕಿನ ಆನಗೋಡಿನ ಭೂದೇವಿ, ಶ್ರೀದೇವಿ ಸಹಿತ ಗೋಪಾಲಕೃಷ್ಣ ದೇವಾಲಯದಲ್ಲಿ ಎ.8 ರಿಂದ ಎ.11 ರ ವರೆಗೆ ಅಷ್ಟಬಂಧ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ ಎಂದು ದೇವಾಲಯದ ಮೊಕ್ತೇಸರ ಗಣಪತಿ ಮಾನಿಗದ್ದೆ ಹೇಳಿದರು.

ಅವರು ಗುರುವಾರ ದೇವಾಲಯದಲ್ಲಿ ಅಷ್ಟಬಂಧ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಮಾಧ್ಯಮದವರೊಂದಿಗೆ ಮಾತನಾಡಿ ಕಾರ್ಯಕ್ರಮದ ವಿವರವನ್ನು ಹಂಚಿಕೊಂಡರು. ಸ್ವರ್ಣವಲ್ಲೀ ಶ್ರೀಗಳ ಆಶೀರ್ವಾದದೊಂದಿಗೆ, ಗೋಕರ್ಣದ ವೇ.ಗಣಪತಿ ಹಿರೇ ಅವರ ನೇತ್ರತ್ವದಲ್ಲಿ ಅಷ್ಟಬಂಧ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಎ.8ರಂದು ಬೆಳಿಗ್ಗೆ ಬ್ರಹ್ಮಕೂರ್ಚ ಹವನ, ಮಹಾ ಸಂಕಲ್ಪ, ಗಣಪತಿ ಪೂಜೆ, ನಾಂದಿ ಪುಣ್ಯಾಹ, ಬಿಂಬ ಶುದ್ಧಿ, ಜಲಾಧಿವಾಸ, ಗಣಹವನ ನಡೆಯಲಿದ್ದು, ಸಂಜೆ ಯಾಗಶಾಲಾ ಪ್ರವೇಶ, ಸಪ್ತಶುದ್ಧಿ, ಉದಕ ಶಾಂತಿ, ವಾಸ್ತು ಬಲಿ ಇತ್ಯಾದಿ ನಡೆಯಲಿವೆ. ಎ.9 ರಂದು ಬೆಳಿಗ್ಗೆ ಕಲಶ ಸ್ಥಾಪನ, ಅಗ್ನಿ ಜನನ, ಸ್ಥಾನ ಶುದ್ಧಿ, ಬಿಂಬ ಶುದ್ಧಿ, ಶಾಂತಿ ಹವನ, ಗಣಪತ್ಯಥರ್ವಶೀರ್ಷ ಹವನ ಮುಂತಾದವು ನಡೆಯಲಿವೆ. ಸಂಜೆ ಶ್ರೀಸೂಕ್ತ, ಪುರುಷ ಸೂಕ್ತ ಹವನ, ಪ್ರತಿಷ್ಠಾ ಪೂರ್ವಾಂಗ ಹವನಗಳು, ಅಷ್ಟಾವಧಾನ ನಡೆಯಲಿದೆ.

ಎ.10ರಂದು ಶತರುದ್ರ ಪಾರಾಯಣ ನಡೆಯಲಿದ್ದು, ಬೆಳಿಗ್ಗೆ 11.56ಕ್ಕೆ ದೇವತಾ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಕಲಷಾಭಿಷೇಕ, ಕಲಾವೃದ್ಧಿ ಹವನ ನಡೆಯಲಿದೆ. ಸಾಯಂಕಾಲ ವೀರಭದ್ರ ಮೂಲಮಂತ್ರ ಜಪ, ಪವಮಾನ ಪಾರಾಯಣ, ದತ್ತಾತ್ರೇಯ ಮೂಲಮಂತ್ರ ಜಪ, ಸರ್ಪಸೂಕ್ತ ಹವನ, ಜೀವ ಕಲಶಾಭಿಷೇಕ ಮುಂತಾದವು ನಡೆಯಲಿವೆ. ಎ.11 ರಂದು ಪೂಜಾ ಹವನ, ಮಹಾಶಾಂತಿ ಹವನ, ಬೃಹ್ಮಣಸ್ಫತಿ ಸೂಕ್ತ ಹವನ, ರುದ್ರ ಹವನ ನಡೆಯಲಿದೆ. ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಆಗಮಿಸಲಿದ್ದು, ಶ್ರೀಗಳಿಂದ ಪೂರ್ಣಾಹುತಿ ನಡೆಯಲಿದೆ. ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಗಣಪತಿ ಮಾನಿಗದ್ದೆ ವಿವರ ನೀಡಿದರು.

800 ವರ್ಷಗಳ ಇತಿಹಾಸ ಹೊಂದಿರುವ ಆನಗೋಡಿನ ಭೂದೇವಿ, ಶ್ರೀದೇವಿ ಸಹಿತ ಗೋಪಾಲಕೃಷ್ಣ ದೇವಾಲಯವು ಭಕ್ತರ ಅಭೀಷ್ಠಗಳನ್ನು ಈಡೇರಿಸುವ ದೇವಾಲಯ ಎಂದೇ ಪ್ರಸಿದ್ಧವಾಗಿದೆ, ಈ ದೇವಾಲಯವು 35 ವರ್ಷಗಳಿಂದ ಹಂತಹಂತವಾಗಿ ಅಭಿವೃದ್ಧಿ ಕಾಣುತ್ತಿದೆ. ದೇವಾಲಯದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದ್ದು ಮುಕ್ತಾಯದ ಹಂತದಲ್ಲಿದೆ. ದೇವಾಲಯದ ಅಭಿವೃದ್ಧಿಗೆ ಸರ್ವರೂ ತನು, ಮನ, ಧನದಿಂದ ಸಹಕರಿಸಬೇಕು: ಗಣಪತಿ ಮಾನಿಗದ್ದೆ.

ಎ.11ರಂದು ದೇವಾಲಯದ ಸುದರ್ಶನ ಸಭಭವನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ಎಂಎಲ್ಸಿ ಶಾಂತಾರಾಮ ಸಿದ್ದಿ, ಮಾಜಿ ಶಾಸಕಿ ರೂಪಾಲಿ ನಾಯ್ಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮುಂತಾದವರು ಆಗಮಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ವಿ.ಗಣಪತಿ ಭಟ್ಟ ಲಿಂಗಭಟ್ರಮನೆ, ಸತೀಶ ಯಲ್ಲಾಪುರ, ಗಿರೀಶ ಭಟ್ಟ ಅಗ್ಗಾಶಿಮನೆ, ಗೋಪಾಲಕೃಷ್ಣ ಭಟ್ಟ ಮತ್ತು ಮಹಾದೇವಿ ಭಟ್ಟ ಅವರನ್ನು ಸನ್ಮಾನಿಸಲಾಗುವುದು ಎಂದು ಗಣಪತಿ ಮಾನಿಗದ್ದೆ ತಿಳಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯದರ್ಶಿ ನರಸಿಂಹ ಗಾಂವ್ಕಾರ್, ಪ್ರಮುಖರಾದ ದಾಮೋದರ ಗಾಂವ್ಕಾರ್, ವಿಶ್ವೇಶ್ವರ ಗಾಂವ್ಕಾರ್ ಮಾನಿಗದ್ದೆ, ನಾಗೇಂದ್ರ ಭಟ್ಟ, ಸತ್ಯನಾರಾಯಣ ಹೆಗಡೆ, ಶ್ರೀಕಾಂತ ಹೊನ್ನೆಬೈಲ್, ಗಣಪತಿ ದೋಣಿಗದ್ದೆ, ಕೆ.ಎಸ್.ಭಟ್ಟ ಮುಂತಾದವರು ಇದ್ದರು.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS
=========================




















