ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಟಿ.ವಿ.ಎಸ್.ಎಕ್ಸೆಲ್ ವಾಹನವು ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಡಿಕ್ಕಿಯಾದ ಪರಿಣಾಮ ಟಿ.ವಿ.ಎಸ್.ಎಕ್ಸೆಲ್ ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕುಮಟಾ ಡಿಪೋದ ಕೆ.ಎಸ್.ಆರ್.ಟಿ.ಸಿ ಬಸ್ಸು ವಿಜಯಪುರದಿಂದ ಹುಬ್ಬಳ್ಳಿ ಮೂಲಕ ಯಲ್ಲಾಪುರ ಮಾರ್ಗವಾಗಿ ಬರುತ್ತಿರುವಾಗ ಮಂಗಳವಾರ ಬೆಳಗಿನ ಜಾವ ಕೋಳಿಕೆರೆ ಸಮೀಪ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹಳಿಯಾಳದ ಬಾವತೀಸ್ ರೇಮತ್ ಘಾಡಿ ಎಂಬಾತ ತನ್ನ ಟಿ.ವಿ.ಎಸ್.ಎಕ್ಸೆಲ್ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೊಂಡುಬಂದು ಬಸ್ಸಿಗೆ ಡಿಕ್ಕಿಹೊಡೆದ ಪರಿಣಾಮ ಬಾವತೀಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಟಿ.ವಿ.ಎಸ್.ಎಕ್ಸೆಲ್ ವಾಹನ ಹಾಗೂ ಬಸ್ಸಿನ ಮುಂಭಾಗಕ್ಕೆ ಬೆಂಕಿ ತಗುಲಿದ್ದು ಟಿ.ವಿ.ಎಸ್.ಎಕ್ಸೆಲ್ ವಾಹನವು ಸುಟ್ಟಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಮೃತಪಟ್ಟ ಬಾವತೀಸ್ ಅವರು ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋದಲ್ಲಿ ನಟಿಸಿ ಗಮನ ಸೆಳೆದಿದ್ದರು.