ಬೆಳೆ ವಿಮೆ ಮಂಜೂರಿ: ಸಂಸದ ಕಾಗೇರಿಯವರನ್ನು ಅಭಿನಂದಿಸಿದ ಅನಂತಮೂರ್ತಿ ಹೆಗಡೆ
ಜಿಲ್ಲೆಯ ಅಡಕೆ, ಕಾಳುಮೆಣಸು, ಮಾವು ಬೆಳೆಯುವ ರೈತರು ದೀರ್ಘಕಾಲದಿಂದ ನಿರೀಕ್ಷಿಸುತಿದ್ದ ಹವಾಮಾನ ಆಧಾರಿತ ಬೆಳೆವಿಮೆಯ ಮೊತ್ತವು ಇಂದಿನಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ. ಸಂಕಷ್ಟದ ಕಾಲದಲ್ಲಿ ರೈತರ ಜೊತೆಗೆ ಎಂದಿನಂತೆ ನಿಂತಿರುವ ಸಂಸದ ಕಾಗೇರಿಯವರನ್ನು ಅಭಿನಂದಿಸುವುದಾಗಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿನ ರೈತರು ಸಂಕಷ್ಟದಲ್ಲಿದ್ದಾಗ ರೈತರ ಪರವಾಗಿ ರಾಜ್ಯ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದರೂ ಸಂಸದ ಕಾಗೇರಿ ಅವರು ಸತತ ಪ್ರಯತ್ನಪಟ್ಟು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಈ ವಿಮಾ ಮೊತ್ತವನ್ನು ಮಂಜೂರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಹಂತವಾಗಿ ಇಂದು ಸುಮಾರು 14 ಕೋಟಿ ರೂಪಾಯಿಗಳ ಬೃಹತ್ ಮೊತ್ತವು ಅರ್ಹ ರೈತರ ಖಾತೆಗಳನ್ನು ತಲುಪಿದ್ದು, ಈ ಪ್ರಕ್ರಿಯೆಯು ಇಂದಿನಿಂದ ಸತತವಾಗಿ ಮುಂದುವರಿಯಲಿದೆ.
ಸುಮಾರು 74 ಕೋಟಿ ರೂಪಾಯಿಗಳ ವಿಮೆ ಹಣ ಮುಂದಿನ ದಿನದಲ್ಲಿ ರೈತರ ಖಾತೆಗಳಿಗೆ ಹಂತ ಹಂತವಾಗಿ ಜಮೆಯಾಗಲಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜಿಲ್ಲೆಯ ಸಮಸ್ತ ರೈತರ ಬಾಂದವರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅನಂತಮೂರ್ತಿ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ
ಮಾ.18 ರಿಂದ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾ ಸಂಸ್ಥೆಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ, ವಿದ್ಯಾರ್ಥಿಗಳ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುವ ದಿನಾಂಕಗಳಂದು, ಅಂದರೆ ಮಾ.18 ರಿಂದ ಏಪ್ರಿಲ್ 2 ರವರೆಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಹಾಗೂ ಪರೀಕ್ಷೆ ಮುಗಿಸಿ ವಾಸ ಸ್ಥಳಕ್ಕೆ ಹಿಂದಿರುಗಲು ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.