ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದು ಲಭಿಸಿದೆ.

ಜಿಲ್ಲೆಯ ರೈತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಹವಾಮಾನ ಆಧಾರಿತ ಬೆಳೆ ವಿಮೆಯ ಎರಡನೇ ಕಂತಿನ ಮೊತ್ತವು ಇಂದಿನಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ.
ಈ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಬಾಕಿ ವಿಮಾ ಮೊತ್ತವು ಈಗ ಅರ್ಹ ಫಲಾನುಭವಿ ರೈತರಿಗೆ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ಈ ಪ್ರಕ್ರಿಯೆಯು ಇಂದಿನಿಂದ ಸತತವಾಗಿ ಮುಂದುವರಿಯಲಿದ್ದು, ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗಳನ್ನು ತಲುಪಲಿದೆ. ಇದು ಜಿಲ್ಲೆಯ ಕೃಷಿಕ ಕುಟುಂಬಗಳಲ್ಲಿ ಯುಗಾದಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಜಿಲ್ಲೆಯ ಅಡಿಕೆ ಬೆಳೆಗಾರರು ಈಗಾಗಲೇ ಎಲೆ ಚುಕ್ಕಿ ರೋಗದ ಬಾಧೆ ಮತ್ತು ಇಳುವರಿ ಕುಂಠಿತದಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇಂತಹ ಕಠಿಣ ಸಮಯದಲ್ಲಿ ಬಾಕಿ ಇದ್ದ ವಿಮೆ ವಿತರಣೆ ಆರಂಭವಾಗಿರುವುದು ಜಿಲ್ಲೆಯ ಕೃಷಿಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಕಾಗೇರಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರಿಗೂ ಈ ವಿಮೆಯ ಸೌಲಭ್ಯ ಹಂತ ಹಂತವಾಗಿ ತಲುಪಲಿದ್ದು, ಸಂಕಷ್ಟದ ಸಮಯದಲ್ಲಿ ಇದು ರೈತರಿಗೆ ದೊಡ್ಡ ಆಸರೆಯಾಗಲಿದೆ ಎಂದು ಸಂಸದ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading