ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಮುದಾಯದ ಪಾತ್ರ ಹಿರಿದು
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಮುದಾಯದ ಪಾತ್ರ ಹಿರಿದು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಿರಸಿಯ ತಾಲೂಕು ಆರೋಗ್ಯ ಅಧಿಕಾರಿ ಡಾ. ಮಧುಕರ್ ಪಾಟೀಲ ಅಭಿಪ್ರಾಯಪಟ್ಟರು.
ಅವರು ಸಿರಸಿಯ ಸಾಮ್ರಾಟ್ ಹೋಟೆಲ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ, ಕಾರವಾರ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿರಸಿ ಮತ್ತು ನಗರಸಭೆ ಶಿರಸಿ ರವರ ಸಂಯುಕ್ತ ಆಶ್ರಯದಲ್ಲಿ ನಡೆದ ಜನ ಆರೋಗ್ಯ ಸಮಿತಿಯ ಸದಸ್ಯರುಗಳಿಗೆ ಹಾಗೂ ಮಹಿಳಾ ಆರೋಗ್ಯ ಸಮಿತಿ ಸದಸ್ಯರುಗಳಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಹೊಸಮನಿ ಮಾತನಾಡಿ ಆರೋಗ್ಯವೆ ಭಾಗ್ಯ ಅದನ್ನು ಕಾಪಾಡುವಲ್ಲಿ ಪ್ರತಿಯೊಬ್ಬರು ಗಮನ ಹರಿಸಬೇಕಾಗಿರುವುದು ಅವಶ್ಯಕವಾಗಿರುತ್ತದೆ ಎಂದರು. ಅತಿಥಿಗಳಾಗಿ ಆಗಮಿಸಿದ ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಧುಕೇಶ್ವರ ರಾಯ್ಕರ್, ಜನ ಆರೋಗ್ಯ ಸಮಿತಿ ಸದಸ್ಯರಾದ ಖಾದರ್ ಆನವಟ್ಟಿ ಮತ್ತು ಐ ಸಿ ಡಿ ಎಸ್ ಮೇಲ್ವಿಚಾರಕರಾದ ವೀಣಾ ಸಿರ್ಸಿಕರ್, ಸದಸ್ಯರಾದ ಭಾರತಿ ಶೆಟ್ಟಿ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದ ನಂತರ ತರಬೇತುದಾರರಾದ ರೂಪಾ ನಾಯ್ಕ್ , ಶ್ರುತಿ ನಾಯ್ಕ್ ಹಾಗೂ ಕ್ಷಯ ರೋಗ ಮೇಲ್ವಿಚಾರಕರಾದ ಉದಯಶಂಕರ ತರಬೇತುದಾರರಾಗಿ ಭಾಗವಹಿಸಿ ಜನ ಆರೋಗ್ಯ ಸಮಿತಿ ಹಾಗೂ ಮಹಿಳಾ ಆರೋಗ್ಯ ಸಮಿತಿಯ ಕಾರ್ಯಗಳು, ಸದಸ್ಯರು, ಅವರ ಜವಾಬ್ದಾರಿಗಳು ಮುಂತಾದವುಗಳ ಬಗ್ಗೆ ಅಗತ್ಯ ಮಾಹಿತಿ ಹಾಗೂ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಗೌರಿ ಸಿ ನಾಯ್ಕ್ ಸ್ವಾಗತಿಸಿದರೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಯ್ಯ ಹಿರೇಮಠ ವಂದಿಸಿದರು. ಜನ ಆರೋಗ್ಯ ಸಮಿತಿಯ ಸದಸ್ಯರು, ಮಹಿಳಾ ಆರೋಗ್ಯ ಸಮಿತಿ ಸದಸ್ಯರು, ಆರೋಗ್ಯ, ಶಿಕ್ಷಣ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು, ಉಪಸ್ಥಿತರಿದ್ದರು.