ಯಲ್ಲಾಪುರ ಪಟ್ಟಣದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ (ಟಿ.ಎಂ.ಎಸ್) ನೂತನ ಅಧ್ಯಕ್ಷರಾಗಿ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಉಪಾಧ್ಯಕ್ಷರಾಗಿ ನರಸಿಂಹ ಕೋಣೆಮನೆ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಟಿ.ಎಂ.ಎಎಸ್. ಆಡಳಿತ ಕಚೆರಿಯಲ್ಲಿ ನಡೆದ ಸಂಸ್ಥೆಯ ಆಡಳಿತ ಮಂಡಳಿಯ ನೂತನ ನಿರ್ದೇಶಕರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಅಭಿನಂದಿಸಿ ಗೌರವಿಸಿದರು.

ಟಿ.ಎಂ.ಎಸ್. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುವ ಅಭಿನಂದನಾ ಸಮಾರಂಭವು ತಾಲೂಕಿನ ಮಾಗೋಡ ಕಾಲೋನಿಯ ವೀರ ಮಾರುತಿ ದೇವಾಲಯದ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.

ಅಭಿನಂದನೆ ಸ್ವೀಕರಿಸಿದ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಟಿ.ಎಂ.ಎಸ್ ಚುನಾವಣೆಯಲ್ಲಿ ಮತದಾರರು ನಮ್ಮ ತಂಡಕ್ಕೆ ಅಭೂತಪೂರ್ವ ಗೆಲುವವನ್ನು ತಂದುಕೊಟ್ಟಿದ್ದಾರೆ. ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಎಲ್ಲರೂ ಒಟ್ಟಾಗಿ ನಮ್ಮ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸೋಣ, ಸಂಸ್ಥೆ ಬೆಳೆದರೆ ರೈತರಿಗೆ ಅನುಕೂಲವಾಗುತ್ತದೆ. ಸಂಸ್ಥೆಯ ಏಳಿಗೆಗೆ ಎಲ್ಲರೂ ಒಂದಾಗಿ ಶ್ರಮಿಸೋಣ, ಸದಸ್ಯ ಬಾಂಧವರ, ರೈತರ ಹಿತ ಕಾಯಲು ನಾವು ಸದಾ ಬದ್ಧರಾಗಿದ್ದೇವೆ ಎಂದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸುದೀರ್ಘ ಹೋರಾಟದ ನಂತರ ಸತ್ಯಕ್ಕೆ ಜಯ ದೊರೆತಿದೆ. ಸಂಸ್ಥೆಯ ಏಳಿಗೆಯನ್ನು ಸಹಿಸದವರಿಗೆ, ಹಿಂಬಾಗಿಲ ರಾಜಕಾರಣ ಮಾಡುವವರಿಗೆ ಸಂಸ್ಥೆಯ ಸದಸ್ಯರು ಸರಿಯಾದ ಪಾಠ ಕಲಿಸಿದ್ದಾರೆ ಎಂದರು.

ಪ್ರಮುಖರಾದ ನಾಗರಾಜ ಕವಡಿಕೇರಿ, ಟಿ.ಆರ್.ಹೆಗಡೆ ತೊಂಡೆಕೆರೆ ಹಾಗೂ ಸಂಸ್ಥೆಯ ನೂತನ ನಿರ್ದೇಶಕರು, ಸದಸ್ಯರು ಇದ್ದರು.

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading