ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ನಿತ್ಯ ಸಾವಿರಾರು ಪ್ರಯಾಣಿಕರು ನಾನಾ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಇಲ್ಲಿನ ಬಸ್ ನಿಲ್ದಾಣದ ಅವ್ಯವಸ್ಥೆ, ಎಲ್ಲೆಂದರಲ್ಲಿ ಕಸಕಡ್ಡಿಗಳ ರಾಶಿ, ಗಲೀಜು ನೀರು ನಿಂತು ಓಡಾಡಲು ಆಗದ ಸ್ಥಿತಿ, ಸಾರ್ವಜನಿಕ ಶೌಚಾಲಯದ ದುರ್ವಾಸನೆ ಮುಂತಾದ ಸಮಸ್ಯೆಗಳಿಂದ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಹೈರಾಣಾಗುವಂತಾಗಿದೆ. ಸ್ವಚ್ಛತೆಯ ನಿರ್ವಹಣೆ ಸರಿಯಾಗಿ ನಡೆಯದೇ ಬಸ್ ನಿಲ್ದಾಣದ ಆವರಣದೊಳಗೆ ಮೂಗು ಮಾತ್ರವಲ್ಲ, ಕಣ್ಣು, ಕಿವಿಗಳನ್ನೂ, ಬಾಯಿಯನ್ನೂ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ.

ಈ ಬಸ್ ನಿಲ್ದಾಣದ ಆವರಣವು ಬೆಳಿಗ್ಗೆಯಿಂದ ಸಂಜೆಯ ವರೆಗೆ ಪ್ರಯಾಣಿಕರ ಓಡಾಟದಿಂದ ಗಿಜಿಗುಡುತ್ತಿದ್ದರೆ, ಸಂಜೆಯ ನಂತರ ಬಿಡಾಡಿ ದನಗಳ ಹಾಗೂ ಬೀದಿ ನಾಯಿಗಳ ವಾಸಸ್ಥಾನವಾಗಿ ಮಾರ್ಪಡುತ್ತಿದೆ. ನಿತ್ಯ ಇಪ್ಪತ್ತಕ್ಕೂ ಹೆಚ್ಚು ಬೀದಿ ನಾಯಿಗಳ ದೊಡ್ಡ ಹಿಂಡು ಬಸ್ ನಿಲ್ದಾಣದ ಆವರಣದಲ್ಲಿಯೇ ಇರುತ್ತದೆ. ಒಮ್ಮೊಮ್ಮೆ ಈ ನಾಯಿಗಳು ಪ್ರಯಾಣಿಕರನ್ನೂ ಅಟ್ಟಿಸಿಕೊಂಡು ಬಂದ ಘಟನೆ ನಡೆದಿದೆ.

ಬೀದಿ ನಾಯಿಗಳ ಅರಚಾಟ, ಓಡಾಟ, ಇವುಗಳಲ್ಲಿಯೇ ಕೆಲವು ರೋಗಿಷ್ಠ ನಾಯಿಗಳ ಸಂಚಾರ ಇವು ಜನರಿಗೆ ಆತಂಕತಂದೊಡ್ಡಿವೆ. ಸಂಜೆಯ ನಂತರ ಹತ್ತಾರು ಬಿಡಾಡಿ ದನಗಳು ಬಸ್ ನಿಲ್ದಾಣದಲ್ಲಿಯೇ ಠಿಕಾಣಿಹೂಡುತ್ತಿದ್ದು, ಇವುಗಳನ್ನು ದೂರ ಓಡಿಸುವ ಗೋಜಿಗೆ ನಿಲ್ದಾಣದಲ್ಲಿರುವ ಸಾರಿಗೆ ಇಲಾಖೆಯ ಯಾವ ಸಿಬ್ಬಂದಿಯೂ ಮುಂದಾಗುತ್ತಿಲ್ಲ.

ಬಸ್ ನಿಲ್ದಾಣದ ಒಳಗೆ ಹಾಗೂ ಹೊರ ಆವರಣವನ್ನು ಸ್ವಚ್ಛವಾಗಿಟ್ಟುಕೊಂಡು ಸರಿಯಾಗಿ ನಿರ್ವಹಣೆ ಮಾಡಲು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಆವರಣದಲ್ಲಿರುವ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಿಯಮಿತವಾಗಿ, ಸರಿಯಾಗಿ ಆಗುತ್ತಿಲ್ಲ, ಆವರಣ ಪ್ರವೇಶಿಸುವ ಬಿಡಾಡಿ ದನಗಳ ಹಾಗೂ ಬೀದಿ ನಾಯಿಗಳ ನಿಯಂತ್ರಣ ಮಾಡುವ ಬಗ್ಗೆ ಸಂಬಂಧಪಟ್ಟವರು ಲಕ್ಷ್ಯ ಹಾಕುತ್ತಿಲ್ಲ ಎಂಬ ದೂರು ಪ್ರಯಾಣಿಕರಿಂದ ಕೇಳಿಬಂದಿದೆ.

ನಿಲ್ದಾಣದ ಆವರಣದಲ್ಲಿರುವ ಶೌಚಾಲಯವು ಗಬ್ಬೆದ್ದು ನಾರುತ್ತಿದ್ದು, ಕಾಲಕಾಲಕ್ಕೆ ಶುಚಿಗೊಳಿಸುವ ಕೆಲಸ ಆಗುತ್ತಿಲ್ಲ, ದಿನವಿಡಿ ದುರ್ವಾಸನೆ ಬೀರುತ್ತಿದ್ದು, ಶೌಚಕ್ಕೆಂದು ಇಲ್ಲಿ ಬಂದವರು ಇಲ್ಲಿನ ಪರಿಸ್ಥಿತಿ ನೋಡಿ ವ್ಯವಸ್ಥೆಯನ್ನು ಶಫಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

===============

Leave a Reply

You cannot copy content of this page