ಕಿರವತ್ತಿ ಕೆರೆಗೆ ಬೇಕಿದೆ ಕಾಯಕಲ್ಪ, ಜಲಮೂಲ ಸಂರಕ್ಷಣೆಗೆ ನೀಡಬೇಕು ಆದ್ಯತೆ
ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದಲ್ಲಿರುವ ವಿಶಾಲವಾದ ಕೆರೆಯು ಈಗ ಸರಿಯಾದ ನಿರ್ವಹಣೆ ಇಲ್ಲದೇ ಕಸಕಡ್ಡಿ, ತ್ಯಾಜ್ಯಗಳ ಆಗರವಾಗಿದೆ. ಈ ಕೆರೆಯು ಸಾಕಷ್ಟು ನೀರನ್ನು ಹೊಂದಿದ್ದು, ಜಾನುವಾರುಗಳ, ಪ್ರಾಣಿ, ಪಕ್ಷಿಗಳ ದಾಹ ಇಂಗಿಸುವ ಪ್ರಮುಖ ತಾಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಈ ಕೆರೆಯಲ್ಲಿ ಜೋಂಡು ಬೆಳೆದಿದೆ. ಹಾಗೂ ಕೆರೆಯ ಅಂಚಿನಲ್ಲಿ ಗಿಡಗಂಟಿಗಳು ಬೆಳೆದಿವೆ. ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಬಿದ್ದಿದೆ. ಸರಿಯಾಗಿ ಸ್ವಚ್ಛಗೊಳಿಸಿ, ಸೂಕ್ತ ನಿರ್ವಹಣೆ ಮಾಡಿದರೆ ಗ್ರಾಮಕ್ಕೆ ಪ್ರಮುಖ ನೀರಿನ ಮೂಲವಾಗಲಿದೆ. ಈ ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಿಜವಾದ ಅಮೃತಸರೋವರವಾಗಲಿ: ವಿಲ್ಸನ್ ಫರ್ನಾಂಡಿಸ್
ಈ ಕೆರೆಯನ್ನು ಸ್ವಚ್ಛಗೊಳಿಸಬೇಕು ಎಂದು ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಆಗ್ರಹಿಸಿದ್ದಾರೆ.
ವಿಲ್ಸನ್ ಫರ್ನಾಂಡಿಸ್
ಅ.15ರಂದು ಈ ಕೆರೆಯ ದಡದಲ್ಲಿ ಗ್ರಾ.ಪಂ.ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಮೃತಸರೋವರ ದಡದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಧ್ವಜಾರೋಹಣ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ನಡೆಯಿತು. ಆದರೆ ಪ್ರಸ್ತುತ ಈ ಕೆರೆಯು ಅಮೃತಸರೋವರವಾಗಿ ಉಳಿದಿಲ್ಲ. ಗಲೀಜು ಕೆರೆಯಾಗಿ ಮಾರ್ಪಟ್ಟಿದೆ.
ಈ ಕೆರೆಯನ್ನು ಸ್ವಚ್ಚಗೊಳಿಸಿ, ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ ಸೂಕ್ತ ನಿರ್ವಹಣೆ ಮಾಡಿದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಆಗ ಮಾತ್ರ ಈ ಕೆರೆಯನ್ನು ಅಮೃತಸರೋವರ ಎಂದು ಕರೆಯುವುದು ಸೂಕ್ತವಾಗುತ್ತದೆ. ಕಾಟಾಚಾರಕ್ಕೆ ಅಮೃತಸರೋವರ ಎಂದು ಕರೆಯದೇ, ಕೆರೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿ, ಅಮೃತಸರೋವರದಂತೆ ಮಾಡಬೇಕು ಎಂದು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಆಗ್ರಹಿಸಿದರು.
ಮಳೆಗಾಲ ಮುಗಿದ ನಂತರ ಈ ಕೆರೆಯನ್ನು ಸ್ವಚ್ಛಗೊಳಿಸಿ, ಸೂಕ್ತ ನಿರ್ವಹಣೆಯೊಂದಿಗೆ ಕೆರೆಗೆ ಕಾಯಕಲ್ಪ ನೀಡಬೇಕು, ಮಳೆಗಾಲದಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸದೇ ತಜ್ಞರ ಸಲಹೆ ಪಡೆದು ಕೆರೆಯ ಸರ್ವತೋಮುಖ ಅಭಿವೃದ್ಧಿ ಕಾಮಗಾರಿ ನಡೆಸಿ, ಜನರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ಒಳಗಾಗಿ ಕೆರೆಯು ಸ್ವಚ್ಛವಾಗಿ, ಅಮೃತಸರೋವರದಂತೆ ಕಂಗೊಳಿಸಲಿ ಎನ್ನುವುದು ಸ್ಥಳೀಯರ ಆಶಯವಾಗಿದೆ.
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಎರಡು ದಿನಗಳಿಂದ ನಡೆಸಿದ ಪ್ರಯತ್ನ… Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!