ಗಣೇಶೊತ್ಸವ ಮೆರವಣಿಗೆಯಲ್ಲಿ ಡಿ.ಜೆ. ಬಳಸುವಂತಿಲ್ಲ ಎಂದು ಸಿಪಿಐ ಸುರೇಶ ಕುಂಬಾರ ಹೇಳಿದರು.

ಪೊಲೀಸ್ ಇಲಾಖೆಯ ವತಿಯಿಂದ ಸೋಮವಾರ ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ನಡೆದ ಗಣೇಶ ಚತುರ್ಥಿ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮೀತಿಯವರಿಗೆ ಸಿಂಗಲ್ ವಿಂಡೋ ವ್ಯವಸ್ಥೆಯ ಮೂಲಕ ಅಗತ್ಯ ಅನುಮತಿಗಳನ್ನು ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಎಲ್ಲರ ಒಳಿತಿಗಾಗಿಯೇ ಸರ್ಕಾರ ಕೆಲವು ನಿಬಂಧನೆಗಳನ್ನು ಹಾಕಿದೆ. ಈ ನಿಯಮ, ನಿಬಂಧನೆಗಳನ್ನು ಪಾಲಿಸಬೇಕು, ಜವಾಬ್ದಾರಿಯಿಂದ ಸುವ್ಯವಸ್ಥಿತವಾಗಿ ಹಬ್ಬವನ್ನು ಆಚರಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಮಾತನಾಡಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ, ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಹಬ್ಬವನ್ನು ಆಚರಿಸೋಣ, ಯಾವುದೇ ಅವಘಡ ನಡೆಯದಂತೆ ಉತ್ಸವ ಸಮಿತಿಯವರು ಹಾಗೂ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದರು.

ಪಿಎಸ್ಸೈ ರಾಜಶೇಖರ ವಂದಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಣೆ ಮಾಡಬೇಕು, ಗಣೇಶ ಮಂಟಪದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು, ಮೆರವಣಿಗೆಯ ಸಂದರ್ಭದಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು, ಉತ್ಸವ ಸಮಿತಿಯವರು ಸ್ವಯಂ ಸೇವಕರನ್ನು ನೇಮಿಸಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಗಣೇಶ ವಿಗ್ರಹಗಳ ವಿಸರ್ಜನಾ ಸ್ಥಳಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು, ಮುಂಚಿತವಾಗಿ ಸ್ವಚ್ಛತಾ ಕಾರ್ಯದ ಜೊತೆ ಮೂರ್ತಿ ವಿಸರ್ಜನಾ ಸ್ಥಳಕ್ಕೆ ತೆರಳಲು ಸರಿಯಾದ ಮಾರ್ಗ ನಿರ್ಮಿಸಬೇಕು, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಬೇಕು ಎಂದರು.

ಇಡಗುಂದಿ ಗಣೇಶೋತ್ಸವ ಸಮೀತಿಯ ಅನೀಲ್ ನಾಯ್ಕ ಮಾತನಾಡಿ, ಉತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು, ನಾವೆಲ್ಲರೂ ಇಲಾಖೆಯೊಂದಿಗೆ ಕೈಜೋಡಿಸುತ್ತೇವೆ ಎಂದರು. ಶ್ರೀಪಾದ ಭಟ್ಟ ಹಿಟ್ಟಿನಬೈಲ್ ಮಾತನಾಡಿ, ಗ್ರಾಮೀಣ ಭಾಗದ ಗಣೇಶೋತ್ಸವಕ್ಕೆ ಸರ್ಕಾರದ ಮಾರ್ಗಸೂಚಿಯಿಂದ ವಿನಾಯಿತಿ ನೀಡಬೇಕು ಎಂದರು.

ಶ್ರೀಪಾದ ಕಸಬೆ ಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಒಂದೇ ರೀತಿಯಾಗಿ ಪಾಲಿಸುವಂತಾಗಬೇಕು. ಕಳೆದ ವರ್ಷ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಡಿಜಿ ಬಳಸಲು ಪೊಲೀಸರು ಅವಕಾಶ ನೀಡಿಲ್ಲ. ಆದರೆ ಪಟ್ಟಣದ ಕೆಲವು ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಸಲಾಗಿತ್ತು ಎಂಬ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರು. ವಿವಿಧ ಗಣೇಶೋತ್ಸವ ಸಮೀತಿಯ ಪ್ರಮುಖರು, ಸಾರ್ವಜನಿಕರು ವಿವಿಧ ಸಲಹೆಗಳನ್ನು ನೀಡಿದರು.

ಹೆಸ್ಕಾಂ ಇಲಾಖೆಯ ಎಇಇ ರಮಾಕಾಂತ ನಾಯ್ಕ, ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರು ಗಡಗಿ, ಅಗ್ನಿ ಶಾಮಕ ಠಾಣಾಧಿಕಾರಿ ಶಂಕರ ಅಂಗಡಿ, ಅರಣ್ಯ ಇಲಾಖೆಯ ವಿಎಸ್.ದರ್ಶನ, ಲೋಕೋಪಯೋಗಿ ಇಲಾಖೆಯ ರವಿ, ಸಾರಿಗೆ ಇಲಾಖೆಯ ರಾಜು ಹೊಸಮನಿ ಮುಂತಾದವರು ಮಾತನಾಡಿದರು. ಪಿಎಸ್ಸೈ ಮಹಾವೀರ ಕಾಂಬ್ಳೆ ಸ್ವಾಗತಿಸಿದರು. ಸಿಬ್ಬಂದಿ ರೇಖಾ ಎಂ.ಸ್. ನಿರ್ವಹಿಸಿದರು.

ಯಲ್ಲಾಪುರ ಪಟ್ಟಣದಲ್ಲಿ ಗಣೇಶೋತ್ಸವ ನಡೆಯುವ ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಸ್ಥಳಕ್ಕೆ ಸೋಮವಾರ ಎಸ್ಪಿ ದೀಪನ್ ಎಂ.ಎನ್. ಭೇಟಿನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಕಾಳಮ್ಮನಗರ ಗಣೇಶೋತ್ಸವ ಮಂಟಪ, ನೂತನನಗರ ಗಣೇಶೋತ್ಸವ ಮಂಟಪ ಹಾಗೂ ಟಿಳಕ್ ಚೌಕ ಗಣೇಶೋತ್ಸವ ಮಂಟಪಗಳಿಗೆ ಅವರು ಬೇಟಿನೀಡಿ, ಗಣೇಶೊತ್ಸವ ಸಮೀತಿಯವರಿಗೆ ವಿವಿಧ ಸಲಹೆ, ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಿಪಿಐ ಸುರೇಶ ಕುಂಬಾರ, ಪಿಎಸ್ಸೈ ರಾಜಶೇಖರ ವಂದಲಿ ಹಾಗೂ ಗಣೇಶೋತ್ಸವ ಸಮೀತಿಯ ಪ್ರಮುಖರು ಇದ್ದರು.

=============

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading