




ಅಂತಾರಾಷ್ಟ್ರೀಯ ಯೋಗ ಪಟು ಎಸಳೆ ಸಂಜಯ ನಾಯ್ಕರಿಗೆ ಸನ್ಮಾನ

ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಗೆದ್ದು ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಎಸಳೆಯ ಸಂಜಯ ಜಗದೀಶ ನಾಯ್ಕ ಅವರನ್ನು ಶಿರಸಿ ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಯೋಗ ಎಂಬುದು ಭಗವಂತನ ವರ, ಯೋಗ ಎಂದರೆ ಸಾಮಾನ್ಯವಲ್ಲ, ಪ್ರತಿ ನಿತ್ಯ ಯೋಗ ಮಾಡುವವರು ದುಶ್ಚಟಗಳಿಂದ ದೂರವಿರುತ್ತಾರೆ. ಯೋಗ, ಧ್ಯಾನ, ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ದುಶ್ಚಟಗಳು ತನ್ನಿಂದ ತಾನೇ ದೂರವಾಗುತ್ತದೆ. ಸಂಜಯ್ ಅವರ ಸಾಧನೆಯನ್ನು ನೋಡಿ ಇನ್ನಷ್ಟು ಯುವಕರು ತಿದ್ದಿಕೊಳ್ಳಬೇಕು. ಒಳ್ಳೆಯದನ್ನು ಮಾಡಿದರೂ ಹೇಳಬೇಕು. ಕೆಟ್ಟದ್ದನ್ನೂ ಮಾಡಿದರೂ ಹೇಳಬೇಕು ಅದು ನಾಗರಿಕನ ಕರ್ತವ್ಯ. ಸಂಜಯ್ ಅವರ ಸಾಧನೆಯ ಹಿಂದೆ ತಂದೆ ತಾಯಿಯ ಶ್ರಮ ಸಾಕಷ್ಟಿದೆ.
ಸಂಜಯ್ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಊರಿಗೆ ನಾಡಿಗೆ ಒಳ್ಳೆಯ ಹೆಸರನ್ನು ತರಲಿ ಎಂದು ಶುಭ ಹಾರೈಸಿದರು, ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಭರವಸೆ ನೀಡಿದರು. ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗ ಪಟು ಸಂಜಯ್ ನಾಯ್ಕ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸಿದರೆ ಪ್ರತಿಭೆಗಳು ಬೆಳೆಯಲು ಅನುಕೂಲ ವಾಗುತ್ತದೆ. ನಾನು 7 ನೇ ತರಗತಿಯಿಂದ ಯೋಗ ಕಲಿಯುತ್ತಿದ್ದೇನೆ.ಈಗಾಗಲೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ, ರಾಜ್ಯ ಹಾಗೂ ದೇಶ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ತುಮಕೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ ಯಾಗಿರುವುದು ಸಂತಸ ತಂದಿದೆ. ನನ್ನ ಪ್ರತಿಭೆಯನ್ನು ಗುರುತಿಸಿ ಗೌರವಿಸಿದ ಬಿಜೆಪಿ ಗ್ರಾಮೀಣ ಮಂಡಳದವರಿಗೆ ಅನಂತಮೂರ್ತಿ ಹೆಗಡೆ ಅವರಿಗೆ ಹಾಗೂ ಊರ ಗಣ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಸುಧೀರ್ ದೇವಾಡಿಗ ಮತ್ತು ಎಸಳೆ ಗ್ರಾಮಸ್ಥರು ನಾಗರಿಕ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನಾಗಪ್ಪ ದೇವಾಡಿಗ, ರತ್ನಾ ಶೆಟ್ಟಿ, ಶಿವರಾಮ ಶೆಟ್ಟಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.

=============













