ರಾಜ್ಯ ಕಾಂಗ್ರೆಸ್ ಸರಕಾರ 13.8.2026ರಂದು ಪಂಚಾಯತ್ ರಾಜ್ ಇಲಾಖೆಯ ಮೂಲಕ ಹೊರಡಿಸಿದ್ದ ಅತಿಕ್ರಮಣದಲ್ಲಿನ ಮನೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇಡುವ ಕುರಿತ ಆದೇಶದಲ್ಲಿನ 1ಅ ದಲ್ಲಿ ವಿವರಿಸಿದ ವಿಷಯಗಳ ಕುರಿತು ಮುಂದಿನ ಆದೇಶದ ವರೆಗೆ ಯಾವುದೇ ಪ್ರಕ್ರಿಯೆ ಕೈಗೊಳ್ಳದಂತೆ 8-10-2026ರಂದು ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರದ ಈ ತೀರ್ಮಾನ ಬಿಜೆಪಿ ಕಾರ್ಯಕರ್ತರು ಉತ್ತರ ಕನ್ನಡ ಜಿಲ್ಲಾಧ್ಯಂತ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಾರ್ಗದರ್ಶನದಲ್ಲಿ ನಡೆಸಿದ್ದ ನಮ್ಮ ಮನೆ ನಮ್ಮ ಹಕ್ಕು ಹೋರಾಟಕ್ಕೆ ದೊರೆತ ಮೊದಲ ಜಯವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸದಾನಂದ ಭಟ್ಟ ನಿಡಗೋಡ ಹೇಳಿದ್ದಾರೆ.

ಈ ಕುರಿತು ಗುರುವಾರ ಪ್ರಕಟಣೆ ನೀಡಿದ ಅವರು, ಈ ಆದೇಶವನ್ನು ಶಾಶ್ವತವಾಗಿ ಹಿಂಪಡೆಯದೆ ಮುಂದಿನ ಆದೇಶದ ವರೆಗೆ ಪ್ರಕ್ರಿಯೆ ಕೈಗೊಳ್ಳದಂತೆ ಸೂಚಿಸಿರುವುದು ಅತಿಕ್ರಮಣದಾರರ ಮೇಲಿನ ತೂಗುಗತ್ತಿಯಾಗಿದೆ. ಈ ಆದೇಶದ ಕುರಿತು ಮತ್ತು ಸಂಸದ ಕಾಗೇರಿ ಮತ್ತು ಬಿಜೆಪಿ ಹೋರಾಟದ ಕುರಿತು ಕಾಂಗ್ರೆಸ್ ಶಾಸಕರು ಇಷ್ಟು ದಿನ ತಮಗೆ ತೋಚಿದಂತೆ ಆರೋಪ ಮಾಡಿ, ಮಾತನಾಡಿ ಈಗ ತಮ್ಮಿಂದಲೇ ಆದೇಶ ಸ್ಥಗಿತವಾಗಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವುದು ಯಾವ ನೈತಿಕತೆ? ಸದ್ಯದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಾಕ್ರೋಶವನ್ನು ತಣಿಸುವ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರಕಾರ ಈ ತಾತ್ಕಾಲಿಕವಾದ ಆದೇಶವನ್ನು ಮಾಡಿದಂತಿದೆ.

ಈ ಕುರಿತು ಬಿಜೆಪಿ ಶಾಸಕರಾದ ಸುನಿಲ್ ಕುಮಾರ್ ಕಾರ್ಕಳ ಮತ್ತು ದಿನಕರ್ ಶೆಟ್ಟಿ ಕುಮುಟಾ ಇವರುಗಳು ಸದನದಲ್ಲಿಯೇ ಹೇಳಿದ್ದರು. ಉತ್ತರ ಕನ್ನಡ ಜಿಲ್ಲೆಯ 200ಕ್ಕಿಂತ ಹೆಚ್ಚು ಗ್ರಾಮ ಪಂಚಾಯತಗಳಲ್ಲಿ ಜನರ ಸಹಭಾಗಿತ್ವದಲ್ಲಿ ಬಿಜೆಪಿ ಆಂದೋಲನವನ್ನು ಕೈಗೊಂಡು ಸುಮಾರು 15 ಸಾವಿರಕ್ಕೂ ಹೆಚ್ಚು ಮನವಿಗಳನ್ನು ಈ ಆದೇಶ ವಾಪಸ್ ಪಡೆಯಲು ರಾಜ್ಯಪಾಲರಿಗೆ ಸಲ್ಲಿಸಿತ್ತು.

ಅರಣ್ಯ, ಬೆಟ್ಟ, ಗಾಂವಥಾನ ಇನ್ನಿತರ ಅತಿಕ್ರಮಣ ಜಾಗಗಳಲ್ಲಿ ಬಹಳ ಹಿಂದಿನಿಂದ ಮನೆಯನ್ನು ನಿರ್ಮಿಸಿಕೊಂಡು ಬಂದು ತೆರಿಗೆ ಪಾವತಿಸುತ್ತಿದ್ದವರನ್ನು ಏಕಾಏಕಿ ತೆರಿಗೆ ಪಟ್ಟಿಯಿಂದ ಕೈ ಬಿಡುವ ತೀರ್ಮಾನ ಮಾಡಿದ್ದು ರಾಜ್ಯ ಕಾಂಗ್ರೆಸ್ ಜನರಿಗೆ ಮಾಡಿದ ಮೋಸವಾಗಿತ್ತು. ಇದನ್ನು ತೀವ್ರತರವಾಗಿ ಖಂಡಿಸಿ ಜನಪರ ಹೋರಾಟ ನಡೆಸಿದ ಬಿಜೆಪಿಯ ಹೋರಾಟಕ್ಕೆ ಮಣಿದು ಈಗ ಮಾಡಿರುವ ಈ ಆದೇಶ ಕೇವಲ ತಾತ್ಕಾಲಿಕವಾದದ್ದು. ಆದೇಶವನ್ನು ಸಂಪೂರ್ಣವಾಗಿ ಹಿಂಪಡೆದುಕೊಳ್ಳುವವರೆಗೂ ಮತ್ತು ಅತಿಕ್ರಮಣದಾರರ ಆಸ್ತಿಯನ್ನು ಯಾವುದೇ ಕಾರಣಕ್ಕೂ ತೆರಿಗೆ ಪಟ್ಟಿಯಿಂದ ಕೈ ಬಿಡದಂತೆ ತಡೆಯಲು ಬಿಜೆಪಿ ಮುಂದೆಯೂ ಕೂಡ ಹೋರಾಟವನ್ನು ನಡೆಸಲಿದೆ.

ಈ ದಿನ ಸರ ಸರಕಾರ ಮಾಡಿರುವ ತಾತ್ಕಾಲಿಕ ಆದೇಶವನ್ನು ತಮ್ಮ ಹೇಳಿಕೆಯ ಮೇಲೆ ಮಾಡಿಸಲಾಗಿದೆ ಎನ್ನುವ ಕಾಂಗ್ರೆಸ್ ಶಾಸಕರುಗಳ ಹೇಳಿಕೆ ನಿಜವಾದದ್ದೇ ಆದರೆ ಶಾಶ್ವತವಾಗಿ ಈ
ಆದೇಶವನ್ನು ಯಾವಾಗ ಹಿಂಪಡೆದು ಆದೇಶದ ಪ್ರತಿಯನ್ನು ಜನರ ಮುಂದೆ ಇಡುತ್ತೇವೆ ಎನ್ನುವುದನ್ನು ಹೇಳಲಿ.

ಅತಿಕ್ರಮಣ ದಾರರನ್ನು ತೆರಿಗೆ ಪಟ್ಟಿಯಿಂದ ಇವರೇ ಹೊರಗಿಟ್ಟು , ಈಗ ಚುನಾವಣೆಯ ಕಾರಣಕ್ಕೆ ಆದೇಶವನ್ನು ನಾವೇ ತಡೆಹಿಡಿಸಿದ್ದೇವೆ ಎಂದು ತಮಗೆ ತಾವೇ ಶಬ್ಬಾಸ್ ಕೊಟ್ಟುಕೊಳ್ಳುವ ಕಾಂಗ್ರೆಸ್ ಶಾಸಕರುಗಳು ಮೊದಲು ಏಕೆ ಈ ಆದೇಶವನ್ನು ಮಾಡಿದ್ದೆವು ಎನ್ನುವುದನ್ನು ಜನರಿಗೆ ತಿಳಿಸಲಿ. ಅತಿಕ್ರಮಣ ದಾರರ ಹಿತ ರಕ್ಷಣೆಗೆ ಬಿಜೆಪಿ ಈ ಆದೇಶವನ್ನು ಶಾಶ್ವತವಾಗಿ ಹಿಂಪಡೆಯುವವರೆಗೂ ತನ್ನ ಹೋರಾಟವನ್ನು ಮುಂದುವರೆಸುತ್ತದೆ ಎಂದು ಸದಾನಂದ ಭಟ್ಟ ತಿಳಿಸಿದ್ದಾರೆ.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading