






ಸರ್ಕಾರಿ, ಅರಣ್ಯ ಭೂಮಿಯ ಆಸ್ತಿಗಳ ತೆರಿಗೆ ಕೈಬಿಡುವ ಸುತ್ತೋಲೆಗೆ ತಾತ್ಕಾಲಿಕ ತಡೆ

ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ನಿರ್ಧರಣೆ ಹಾಗೂ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಆಸ್ತಿಗಳನ್ನು ಕೈಬಿಡುವ ಕುರಿತು ಕಳೆದ ಆಗಸ್ಟ್ 13ರಂದು ಹೊರಡಿಸಲಾಗಿದ್ದ ಸುತ್ತೋಲೆಗೆ ತತ್ಕಾಲಿಕ ತಡೆ ನೀಡಲಾಗಿದ್ದು, ಈ ವಿಷಯದಲ್ಲಿ ಪ್ರಮುಖ ಜನಪ್ರತಿನಿಧಿಗಳ ಪರ, ವಿರೋಧ ಹೇಳಿಕೆ ವ್ಯಕ್ತವಾಗಿದೆ.
ಸ್ವಾಗತಿಸಿದ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಶಾಸಕ ಭೀಮಣ್ಣ ನಾಯ್ಕ

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳ ತೆರಿಗೆ ಸಂಗ್ರಹಣೆಯನ್ನು ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಸಮಸ್ಯೆಗಳ ಕುರಿತು ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಭೀಮಣ್ಣ ನಾಯ್ಕ ಅವರು ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟು, ಸುತ್ತೋಲೆಯನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು.
ಶಾಸಕರ ಮನವಿಯನ್ನು ಪರಿಗಣಿಸಿದ ಸಚಿವ ಈಶ್ವರ ಬಿ. ಖಂಡ್ರೆ ಅವರು, ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ಕೈಬಿಡುವ ಕುರಿತು ಹೊರಡಿಸಲಾಗಿದ್ದ ಸುತ್ತೋಲೆಗೆ ತಡೆ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಎದುರಾಗಿದ್ದ ತೆರಿಗೆ ಹಾಗೂ ಇ-ಸ್ವತ್ತು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರದ ನಿರೀಕ್ಷೆ ಮೂಡಿದೆ ಎಂದು ಶಾಸಕ ಹೆಬ್ಬಾರ್ ಹಾಗೂ ಶಾಸಕ ಭೀಮಣ್ಣ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.
ಆದರೆ ಇದಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದಿದ್ದಾರೆ
ಶಾಸಕರ ಕಣ್ಣೊರೆಸುವ ನಾಟಕಕ್ಕೆ ಜನ ಮರುಳಾಗುವುದಿಲ್ಲ: ಸಂಸದ ಕಾಗೇರಿ

ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂತರ ಶೋಷಣೆಯ ಭಾಗವಾಗಿ, ಗ್ರಾಮೀಣ ಭಾಗದ ಬಡವರ ಸೂರನ್ನೇ ಕಸಿದುಕೊಳ್ಳುವ ದುರುದ್ದೇಶದಿಂದ ಹೊರಡಿಸಲಾಗಿದ್ದ ಆಗಸ್ಟ್ 13ರ ಜನವಿರೋಧಿ ಆದೇಶವು ಬಡವರ ಪಾಲಿಗೆ ಕಂಟಕವಾಗಿತ್ತು. ಮನೆ ನಂಬರ್ ತಂತ್ರಾಂಶ ಹಾಗೂ ಇ-ಸ್ವತ್ತು 2.0 ವ್ಯವಸ್ಥೆಯ ನೆಪದಲ್ಲಿ ಸಾವಿರಾರು ಬಡ ಕುಟುಂಬಗಳನ್ನು ಆಸ್ತಿ ಹಕ್ಕಿನಿಂದ ವಂಚಿಸಲು ಸರ್ಕಾರ ಸಂಚು ರೂಪಿಸಿತ್ತು. ಈ ಕರಾಳ ನಡೆಯ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಜನರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡ ಬೃಹತ್ ಹೋರಾಟ ಮತ್ತು ಜನರ ಜ್ವಾಲೆಯಂತಹ ಆಕ್ರೋಶಕ್ಕೆ ಬೆಚ್ಚಿಬಿದ್ದ ಆಡಳಿತ ಪಕ್ಷ, ತಕ್ಷಣಕ್ಕೆ ಮನೆ ನಂಬರ್ ರದ್ದು ಪ್ರಕ್ರಿಯೆಗೆ ಕೇವಲ ತಾತ್ಕಾಲಿಕ ತಡೆಯನ್ನಷ್ಟೇ ನೀಡಿದೆ. ಇದು ಕೇವಲ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಷ್ಟೇ ಎಂದು ಸಂಸದ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪ್ರಕಟಣೆ ನೀಡಿದ ಅವರು, ಮುಂಬರುವ ಪಂಚಾಯತ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಶಾಸನಬದ್ಧವಾಗಿ ಕಾಯ್ದೆಗೆ ಯಾವುದೇ ತಿದ್ದುಪಡಿ ತರದೆ ಹೊರಡಿಸಿರುವ ಈ ಅರ್ಧಂಬರ್ಧ ಆದೇಶವನ್ನು ನಂಬಲು ಜಿಲ್ಲೆಯ ಜನರೇನೂ ಮೂರ್ಖರಲ್ಲ. ಸರ್ಕಾರದ ಈ ಚಾಲಾಕಿ ನಡೆ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಾಟಕವನ್ನು ಜನರು ಸ್ಪಷ್ಟವಾಗಿ ಅರ್ಥೈಸಿಕೊಂಡಿದ್ದಾರೆ.
ಈ ಅರ್ಧಂಬರ್ಧ ಆದೇಶವು ಬಡವರ ಪರವಾಗಿ ಧ್ವನಿಯೆತ್ತಿದ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಜನತೆಯ ಅಭೂತಪೂರ್ವ ಹೋರಾಟ ಮತ್ತು ಬಿಜೆಪಿಯ ಸಂಘಟಿತ ಆಕ್ರೋಶಕ್ಕೆ ಸಂದ ಪ್ರಥಮ ತಾತ್ಕಾಲಿಕ ಜಯವಾಗಿದೆ. ಸರ್ಕಾರಕ್ಕೆ ಪ್ರಾಮಾಣಿಕ ಬದ್ಧತೆ ಇದ್ದರೆ ತಕ್ಷಣವೇ ಕಾಯ್ದೆಗೆ ಕಾನೂನುಬದ್ಧ ತಿದ್ದುಪಡಿ ತಂದು ಬಡವರ ಮನೆ ಮತ್ತು ಆಸ್ತಿಗಳಿಗೆ ಶಾಶ್ವತ ಭದ್ರತೆ ನೀಡಬೇಕು. ಅಲ್ಲಿಯವರೆಗೆ ಜಿಲ್ಲೆಯ ಜನತೆಯ ಜೊತೆಗೂಡಿ ನಮ್ಮ ಈ ಪ್ರಜಾಸತ್ತಾತ್ಮಕ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಕಾಗೇರಿ ತಿಳಿಸಿದ್ದಾರೆ.

=============














