ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು, ಹಿಂಸಾತ್ಮಕವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ್ದು, ಆರೋಪಿಗಳ ವಿರುದ್ಧ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಕಲಘಟಗಿಯ ಮಂಜುನಾಥ ತಂದೆ ಸೋಮಯ್ಯ ರುದ್ರಾಕ್ಷಿ ಹಾಗೂ ಅಲ್ತಾಪ್ ತಂದೆ ಹಜರೆಸಾಬ್ ಓದೇಕರ್ ಎಂಬುವವರು, ಅಶೋಕ ಲೈಲ್ಯಾಂಡ್ ವಾಹನದಲ್ಲಿ ಎರಡು ಹೋರಿಗಳು ಮತ್ತು ಒಂದು ಆಕಳು ಕರುವನ್ನು ಹಿಂಸಾತ್ಮಕವಾಗಿ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗಿಸುತ್ತಿದ್ದಾಗ, ಯಲ್ಲಾಪುರ ಪೊಲಿಸರು ಯಲ್ಲಾಪುರ ಪಟ್ಟಣದ ಮಲಬಾರ್ ಹೊಟೇಲ್ ಸಮೀಪ ದಾಳಿ ನಡೆಸಿ ಆರೋಪಿಗಳನ್ನು ಹಾಗೂ ಜಾನುವಾರುಗಳನ್ನು ವಾಹನ ಸಮೇತವಾಗಿ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಕಪ್ಪು ಬಣ್ಣದ ಎರಡು ಹೋರಿಗಳು ಹಾಗೂ ಕಂದು ಬಣ್ಣದ ಆಕಳ ಕರುವಿನ ಮೌಲ್ಯ ಅಂದಾಜು 26 ಸಾವಿರ ಹಾಗೂ ವಾಹನದ ಮೌಲ್ಯ 2 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.