ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ಉತ್ತಮ ಸಹಕಾರ ನೀಡುತ್ತಿದ್ದು, ನಿಗಧಿಪಡಿಸಿದ ಅವಧಿಗಿಂತಲೂ ಮೊದಲೇ ಜಿಲ್ಲೆಯಲ್ಲಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ ಜಿಲ್ಲೆ ಅವರ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ನೌಕರರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಈಗಾಗಲೇ ಶೇ.100 ರಷ್ಟು ಎಮ್ಯುನರೇಷನ್ ಫಾರಂಗಳನ್ನು ಮತದಾರರಿಗೆ ವಿತರಿಸಲಾಗಿದ್ದು ಫಾರಂಗಳ ಡಿಜಿಟಲೈಸೇಷನ್ ಪ್ರಕ್ರಿಯೆಯಲ್ಲಿ ಶೇ.64 ರಷ್ಟು ಪ್ರಗತಿ ಸಾಧಿಸಲಾಗಿದೆ, ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ, ಒಂದು ಕುಟುಂಬದ ಮತದಾರರು ಬೇರೆ ಮತದಾನ ಕೇಂದ್ರಗಳಲ್ಲಿ ಹಂಚಿಕೆಯಾಗುವುದನ್ನು ತಪ್ಪಿಸಲಾಗುವುದು ಎಂದರು.

ಸರ್ಕಾರಿ ನೌಕರರಿಗೆ ದಿನನಿತ್ಯದ ಕೆಲಸಗಳನ್ನು ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸುವ ಒತ್ತಡಗಳಿರುವುದರಿಂದ ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದ್ದು, ಆರೋಗ್ಯದಲ್ಲಿ ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಯಾವುದೋ ಒಂದು ಮಾತ್ರೆ ಸೇವಿಸಿ ತಾವೇ ವೈದ್ಯರಾಗದೇ, ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಪ್ರತಿಯೊಬ್ಬ ಅಧಿಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಆರೋಗ್ಯವಂತವಾಗಿರಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ, ಲೈಫ್‍ಸ್ಟೈಲ್ ಕಾಯಿಲೆಗಳು ಈಗ ಸಾಮಾನ್ಯವಾಗಿವೆ ಇವುಗಳನ್ನು ನಿರ್ಲಕ್ಷಿಸದೇ ಸೂಕ್ತ ಸಮಯದಲ್ಲಿ ಪರೀಕ್ಷಿಸಿಕೊಂಡು ಅಗತ್ಯ ಚಿಕಿತ್ಸೆ ಪಡೆಯಬೇಕು. ಇಂದಿನ ಶಿಬಿರಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ತಪಾಸಣೆಗೆ ವ್ಯವಸ್ಥೆ ಮಾಡಿದ್ದು, ಉಚಿತವಾಗಿ ಔಷಧಗಳ ವಿತರಣೆ ಮಾಡಲಾಗುತ್ತಿದೆ. ಗಂಭೀರ ಸ್ವರೂಪದ ರೋಗಗಳು ಪತ್ತೆಯಾದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಎಸ್.ಐ.ಆರ್. ಪ್ರಕಿಯೆಗಳು ನಡೆಯುತ್ತಿರುವ ಈ ಅವಧಿಯಲ್ಲಿ ಓಟಿಪಿ ಮೂಲಕ ಮತದಾರರನ್ನು ವಂಚಿಸುವ ಕುರಿತಂತೆ ಎಚ್ಚರವಹಿಸುವಂತೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಅರಿವು ಮೂಡಿಸುತ್ತಿದ್ದು, ಎಸ್.ಐ.ಆರ್ ಹೆಸರು ಹೇಳಿಕೊಂಡು ಬ್ಯಾಂಕ್ ಮಾಹಿತಿ ಮತ್ತು ಓಟಿಪಿ ಕೇಳಿದಲ್ಲಿ ಸಾರ್ವಜನಿಕರು ನೀಡಬಾರದು. ಮೈಂಡ್ ಆಕ್ಟಿವ್ ಆಗಿದ್ದರೆ ಕಾಯಿಲೆಗಳು ಕಡಿಮೆಯಾಗಲಿವೆ, ಸಮಸ್ಯೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಜಯ್ ದೊಡ್ಡಮನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading