




ಟಿ.ಎಂ.ಎಸ್. ಫಲಿತಾಂಶವು ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ: ಸಂಸದ ಕಾಗೇರಿ

ಯಲ್ಲಾಪುರ ಟಿ.ಎಂ.ಎಸ್.ಫಲಿತಾಂಶವು ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಸಿಕ್ಕಿದ ದೊಡ್ಡ ಕೊಡುಗೆಯಾಗಿದೆ. ಈ ಫಲಿತಾಂಶವು ಸಹಕಾರಿ ಕ್ಷೇತ್ರದ ಪಾವಿತ್ರ್ಯತೆಗೆ ವಿರುದ್ಧವಾಗಿ ನಡೆದುಕೊಳ್ಳುವವರಿಗೆ ತಕ್ಕ ಉತ್ತರ ನೀಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಯಲ್ಲಾಪುರ ಪಟ್ಟಣದ ಟಿ.ಎಂ.ಎಸ್. ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಟಿ.ಎಂ.ಎಸ್. ಸದಸ್ಯರಿಗೆ, ಹಿತೈಷಿಗಳಿಗೆ ಅಭಿನಂದಿಸುವ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಸಂಸ್ಥೆಯ ಚುನಾವಣೆಯ ಫಲಿತಾಂಶದಲ್ಲಿ ಸಹಕಾರಿ ಕ್ಷೇತ್ರದ ಗೆಲುವನ್ನು ಕಾಣಬಹುದು.

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲ ಎಂದು ಎಂದು ಭಾಷಣ ಮಾಡುತ್ತಾಸಹಕಾರಿ ಕ್ಷೇತ್ರದ ತತ್ವಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ರಾಜಕೀಯ ಮಾಡುವ ರಾಜಕಾರಣಿಗಳಿಗೆ ಟಿ.ಎಂ.ಎಸ್.ಫಲಿತಾಂಶವು ನೀಡಿದ ತಕ್ಕ ಉತ್ತರ ನೀಡಿದೆ. ಸಂಸ್ಥೆಯ ಜಾಗೃತ ಮತದಾರರಿಂದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಸಿಕ್ಕಿದೆ, ಇದು ನಿಜವಾದ ಸಹಕಾರಿಗಳ ನೈತಿಕ ಜಯ ಎಂದರು. ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಉಜ್ವಲ ಭವಿಷ್ಯ ಇದೆ.
ಸಹಕಾರಿ ಕ್ಷೇತ್ರವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು, ರೈತರ ಅನಿವಾರ್ಯಕ್ಕೆ ಸ್ಪಂದಿಸುವ ಶಕ್ತಿ ಸಹಕಾರಿ ಸಂಘಗಳಿಗೆ ಇದೆ, ಇದನ್ನು ಇನ್ನಷ್ಟು ಬಲಪಡಿಸುವ ಕೆಲಸ ಆಗಬೇಕು ಎಂದ ಅವರು, ಅಡಿಕೆ ಬೆಳೆಗಾರರ ವಿವಿಧ ಸಮಸ್ಯೆ ಮತ್ತು ಅಡಿಕೆ ಮಾರುಕಟ್ಟೆ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಮಟ್ಟದಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಅಡಿಕೆ ಕ್ಷೇತ್ರದ ವಿಸ್ತರಣೆ ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದು, ಪಾರಂಪರಿಕ ಅಡಿಕೆ ಬೆಳೆಗಾರರು ಪರ್ಯಾಯ ಬೆಳೆಗಳನ್ನು ಬೆಳೆಯುವತ್ತ ಲಕ್ಷ್ಯ ವಹಿಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದುವರೆಗೆ ಟಿ.ಎಂ.ಎಸ್.ಸಂಸ್ಥೆಯಲ್ಲಿ ಸಂಸ್ಥೆಯಲ್ಲಿ ರಾಜಕೀಯ, ಜಾತಿ ವೈಷಮ್ಯ ತರಲಿಲ್ಲ, ಯಾರ ವಿರುದ್ಧವೂ ದ್ವೇಷ ಸಾಧಿಸಿಲ್ಲ. ನಾವು ಹಣ ಗಳಿಸಲು ಇಲ್ಲಿ ಬಂದಿಲ್ಲ, ಸಹಕಾರಿ ಕ್ಷೇತ್ರದ ಪಾವಿತ್ರ್ಯ ಕಾಪಾಡಲು ಬಂದಿದ್ದೇನೆ, ಇದು ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ, ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಹೊಸ ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತೇವೆ, ರೈತರ ಹಿತ ಕಾಪಾಡುತ್ತೇವೆ ಎಂದರು.

ವಿಶ್ವದರ್ಶನ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಜನರು ನಾರಾಯಣ ಭಟ್ಟ ಅವರ ಜೊತೆಗಿದ್ದಾರೆ ಎಂಬ ನಿರ್ಣಯವನ್ನು ಚುನಾವಣಾ ಫಲಿತಾಂಶದ ಮೂಲಕ ಕೊಟ್ಟಿದ್ದಾರೆ, ಗೊಂದಲದ ನಡುವೆಯೂ ಪ್ರಬುದ್ಧ ತೀರ್ಮಾನ ಬಂದಿದೆ, ಸತ್ಯಕ್ಕೆ ಜಯ ದೊರೆತಿದೆ ಎಂದರು. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಸಿಗಬೇಕಾದ ಸೌಲಭ್ಯ ಸರಿಯಾಗಿ ಸಿಗದಿದ್ದರೆ ಬ್ಯಾಂಕಿನ ಮುಂದೆ ಸಂಸದ ಕಾಗೇರಿ ನೇತ್ರತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಅಡಿಕೆ ಮಾರುಕಟ್ಟೆ ಯಲ್ಲಾಪುರದ ಜನರ ಶಕ್ತಿಯಾಗಿದ್ದು, ಈ ಮಾರುಕಟ್ಟೆಯ ಕೇಂದ್ರ ಟಿ.ಎಂ.ಎಸ್ ಸಂಸ್ಥೆ, ಇಂತಹ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಸದಸ್ಯರು ಸಜ್ಜನರಿಗೆ ವಹಿಸಿದ್ದಾರೆ, ಸಾತ್ವಿಕ ಶಕ್ತಿಗೆ ಸಿಕ್ಕಿದ ಜಯ ಇದು ಎಂದರು.

ಟಿ.ಎಸ್.ಎಸ್.ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಮುಂದಿರುವ ನಮ್ಮ ಜಿಲ್ಲೆಯಲ್ಲಿ ಸಹಕಾರಿ ವ್ಯವಸ್ಥೆ ದಾರಿ ತಪ್ಪಲು ಕಾರಣವೇನು ಎಂಬುದನ್ನು ಅರಿಯಬೇಕು, ಸಹಕಾರಿ ಕ್ಷೇತ್ರ ಉಳಿಯಬೇಕಾದರೆ ಧೈರ್ಯದಿಂದ ಮುನ್ನುಗ್ಗಬೇಕು, ಯೋಗ್ಯ ವ್ಯಕ್ತಿಗಳನ್ನು ಸಹಕಾರಿ ಸಂಘಗಳಿಗೆ ಆಯ್ಕೆ ಮಾಡಬೇಕು, ಸಹಕಾರಿ ಕ್ಷೇತ್ರದ ಮಹನೀಯರ ಹೆಸರು ಹೇಳಿಕೊಂಡು ಬೇಳೆ ಬೇಯಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ, ಈ ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ, ಬಿಜೆಪಿ ಮುಖಂಡ ಎಲ್.ಟಿ.ಪಾಟೀಲ, ರಾಘವೇಂದ್ರ ಭಟ್ಟ ಹಾಸಣಗಿ, ನಾರಾಯಣ ಜಡ್ಡಿಪಾಲ ಮುಂತಾದವರು ವೇದಿಕೆಯಲ್ಲಿ ಇದ್ದರು. ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ವೆಂಕಟ್ರಮಣ ಭಟ್ಟ ಸ್ವಾಗತಿಸಿದರು. ವೆಂಕಟ್ರಮಣ ಹೆಗಡೆ ನಿರ್ವಹಿಸಿದರು. ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಸುದೀಪ ಹೆಗಡೆ ನಿರ್ದೇಶಕರನ್ನು ಪರಿಚಯಿಸಿದರು. ವೇದಾ ಭಟ್ಟ ಪ್ರಾರ್ಥಿಸಿದರು. ವಿನಾಯಕ ಮೆಣಸುಮನೆ ವಂದಿಸಿದರು. ಸಂಸ್ಥೆಯ ಸಂಸ್ಥೆಯ ನಿರ್ದೇಶಕರು, ಸದಸ್ಯರು, ಹಿತೈಷಿಗಳು, ಸಿಬ್ಬಂದಿಗಳು ಇದ್ದರು.

===========================













