



ಜಿಲ್ಲೆಯಲ್ಲಿ ಮತಗಟ್ಟೆ ಸಂಖ್ಯೆಯಲ್ಲಿ ಹೆಚ್ಚಳ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಪ್ರಸ್ತುತ 1445 ಮತಗಟ್ಟೆಗಳಿದ್ದು, ಕೆಲವು ಮತಗಟ್ಟೆಗಳಲ್ಲಿ 1200 ಕ್ಕೂ ಅಧಿಕ ಮತದಾರರು ಇರುವುದರಿಂದ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ
ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಜಿಲ್ಲೆಯಲ್ಲಿ ಇದುವರೆಗಿನ ಪ್ರಗತಿ ಕುರಿತಂತೆ ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹಳಿಯಾಳದಲ್ಲಿ 13, ಕಾರವಾರದ 8, ಕುಮಟಾದ 11, ಭಟ್ಕಳದ 22, ಶಿರಸಿಯ 15 ಮತ್ತು ಯಲ್ಲಾಪುರದ 10 ಮತಗಟ್ಟೆಗಳು ಸೇರಿದಂತೆ ಒಟ್ಟು 79 ಮತಗಟ್ಟೆಗಳಲ್ಲಿ 1200 ಕ್ಕೂ ಅಧಿಕ ಮತದಾರರಿದ್ದು, ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಾಗಿದ್ದು ಇದರಿಂದ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ 1524 ಕ್ಕೆ ಏರಿಕೆ ಆಗಲಿದೆ ಎಂದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಜಿಲ್ಲೆಯ ಇದುವರೆಗೆ ಪ್ರಗತಿಯ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಯಾವುದೇ ಗೊಂದಲಗಳಿದ್ದಲ್ಲಿ ತಮ್ಮ ಪಕ್ಷಗಳ ಬಿ.ಎಲ್.ಎ ಗಳ ಮೂಲಕ ಮತ್ತೊಮ್ಮೆ ಪರಿಶೀಲನೆ ಮಾಡಿಕೊಂಡು ದೃಢಪಡಿಸಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬಿ.ಜೆ.ಪಿ ಪಕ್ಷದ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಬಾಬು ಶೇಖ್, ಪ್ರತಿನಿಧಿ ಸಯ್ಯದ್ ಅಶ್ರಫ್, ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಇದ್ದರು.
ಅಧಿಕಾರಿಗಳಿಗೆ ಉತ್ತಮ ಸಂವಹನ ಕಲೆ ಅತ್ಯಗತ್ಯ: ಡಾ.ದಿಲೀಷ್ ಶಶಿ
ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಉತ್ತಮ ಸಂವಹನ ಅತ್ಯಗತ್ಯ . ಜನರೊಂದಿಗೆ ದಿನನಿತ್ಯ ಎದುರಿಸುವ ಹಲವು ಬಗೆಯ ಸಮಸ್ಯೆಗಳನ್ನು ಜಾಣತನದ ಸಂವಹನ ಕಲೆಯಿಂದ ಮಾತ್ರಲೇ ನಿವಾರಿಸಬಹುದಾಗಿದೆ. ಮಾತನಾಡದೇ ಉಳಿದರೆ ಅದೇ ದೊಡ್ಡ ಸಮಸ್ಯೆ ಆಗಲುಬಹುದು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಹೇಳಿದರು.

ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ವಿಶೇಷಸಮಗ್ರ ಪರಿಷ್ಕಕರಣೆ ಅಂಗವಾಗಿ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಆಯ್.ಆರ್. ಒಳಗೊಂಡು ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ಜನರಿಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಲು ಪರಿಣಾಮಕಾರಿ ಸಂವಹನ ಅಗತ್ಯವಾಗಿರುತ್ತದೆ. ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಎಸ್.ಆಯ್.ಆರ್. ಕುರಿತು ಸಾಕಷ್ಟ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಎಲ್ಲ ಮತದಾರರನ್ನು ತಲುಪುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.91% ಸಾಧನೆ ಸಾಧ್ಯವಾಗಿರುವುದಕ್ಕೆ ಸ್ವೀಪ್ ಸಮಿತಿಯ ಉತ್ತಮ ಸಂವಹನವು ಕಾರಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೆಸ್ತಾ, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

==================













