ಯಕ್ಷಗಾನ ಕಲಾವಿದ ಶ್ರೀಧರ ಕಾಸರಕೋಡರಿಗೆ ಯಲ್ಲಾಪುರದಲ್ಲಿ ನುಡಿನಮನ
ಯಕ್ಷಗಾನದ ಹಾಸ್ಯಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಅವರಿಗೆ ಭಾನುವಾರ ಯಲ್ಲಾಪುರಪಟ್ಟಣದ ಮೌನ ಗೃಂಥಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ಅರ್ಥಧಾರಿ ಸಿ ಜಿ ಹೆಗಡೆ ಮಾತನಾಡಿ, ದ್ವಂದ್ವಾರ್ಥ, ಅಶ್ಲೀಲ ಹಾಸ್ಯದ ಮೂಲಕ ಜನರಂಜಿಸುವರೇ ಹೆಚ್ಚಿರುವ ಸಂದರ್ಭದಲ್ಲಿ, ಅಶ್ಲೀಲವಲ್ಲದ, ರಾಜ ಹಾಸ್ಯದ ಮೂಲಕ ಜನರನ್ನು ಶಿಷ್ಟವಾಗಿ, ವಿಶಿಷ್ಟವಾಗಿ ನಗಿಸುವುದರಲ್ಲಿ ಶ್ರೀಧರ ಕಾಸರಕೋಡ ನಿಸ್ಸೀಮರಾಗಿದ್ದರು. ಅವರ ಆಕಸ್ಮಿಕ ಅಕಾಲಿಕ ಮರಣ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ ಶಂಕರ ಭಟ್ಟ ಮಾತನಾಡಿ, ನವರಸದಲ್ಲಿ ಹಾಸ್ಯ ಪ್ರಧಾನ. ಅದರಲ್ಲೂ ರಾಜಹಾಸ್ಯ ಹೇಗೆ ಎನ್ನುವುದನ್ನು ರಂಗದಲ್ಲಿ ಕಾಸರಕೋಡ ತೋರಿಸಿ ಕೊಟ್ಟಿದ್ದರು ಎಂದರು.
ಯಕ್ಷಗಾನ ಅರ್ಥಧಾರಿ ಎಂ ಎನ್ ಹೆಗಡೆ ಹಳವಳ್ಳಿ ಮಾತನಾಡಿ, ಅದ್ಭುತ ಲಯ, ಪ್ರಸಂಗದ ಮೇಲೆ ಹಿಡಿತ, ಹೊಸತನ ಹೊಂದಿದ್ದ, ಸಾವಿರಾರು ಜನರನ್ನು ರಂಗದಲ್ಲಿ ನಗಿಸುತ್ತ, ಬೇರೆಯವರ ಸಂತೋಷಕ್ಕೆ ಕಾಸರಕೋಡ ಕಾರಣರಾಗಿದ್ದಾರೆ. ಪ್ರೇಕ್ಷಕರು ಮುಜುಗುರ ಪಡುವಂತಹ ಹಾಸ್ಯ ಮಾಡದೇ ಗೌರವಯುತ ಹಾಸ್ಯದ ಮೂಲಕ ಜನರ ರಂಜಿಸಿದ್ದರು ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಕಲಾವಿದ ಸತೀಶ ಹೆಗಡೆ, ಯು ಕೆ ಬ್ಯಾಂಕ್ ಸಲಹೆಗಾರ ಪಿ ಜಿ ಹೆಗಡೆ ಕಳಚೆ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ, ಉಪಾಧ್ಯಕ್ಷ ಶ್ರೀಧರ ಅಣಲಗಾರ, ಪತ್ರಕರ್ತ ಕೆ ಎಸ್ ಭಟ್ಟ ಆನಗೋಡ, ಪ್ರಮುಖರಾದ ನರಸಿಂಹ ಭಟ್ಟ ತಾಳಗುಪ್ಪ, ಶಿವಾನಂದ ಹೆಗಡೆ ಕೊಂಡದಕುಳಿ, ಶ್ರೀಶ ಹೆಗಡೆ, ಗುರು ಭಟ್ಟ ಜಂಬೆಸಾಲ್, ಎಂ. ಎಸ್ ಹೆಗಡೆ, ಪ್ರಶಾಂತ ಹೆಗಡೆ ಇತರರು ನಮನ ಸಲ್ಲಿಸಿದರು. ಕಲಾಭಿಮಾನಿಗಳು ಕಾಸರಕೋಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನುಡಿನಮನದ ಮೂಲಕ ಶೃದ್ಧಾಂಜಲಿ ಸಲ್ಲಿಸಿದರು.