ಅತಿವೃಷ್ಟಿ ಹಾಗೂ ಅನಾವೃಷ್ಟಿ ಹಾನಿ ಬಗ್ಗೆ ತುರ್ತಾಗಿ ವರದಿ ಸಲ್ಲಿಸಿ : ಸಚಿವ ಲಕ್ಷ್ಮಣ ಸವದಿ
ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಉಂಟಾಗಿರುವ ಸಮಗ್ರ ಹಾನಿಯ ವಿವರವಾದ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಿದ್ಧಪಡಿಸಿ ಮೂರು ದಿನದ ಒಳಗಾಗಿ ತಲುಪಿಸುವಂತೆ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಅವರು ಶುಕ್ರವಾರ ಶಿರಸಿಯ ಮಿನಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಕೆಲವೆಡೆ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿದ್ದರೆ, ಇನ್ನು ಕೆಲವೆಡೆ ಅನಾವೃಷ್ಟಿಯಿಂದ ಬರಗಾಲದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಪರಿಶೀಲನಾ ಸಭೆ ನಡೆಸಿ, ಹಾನಿಯ ನಿಖರ ಪಟ್ಟಿ ಸಿದ್ಧಪಡಿಸಲು ನಿರ್ದೇಶಿಸಿದ್ದಾರೆ. ಆದ್ದರಿಂದ ಅಧಿಕಾರಿಗಳು ತಮ್ಮ ತಮ್ಮ ತಾಲೂಕು ವ್ಯಾಪ್ತಿಯ ಹಾನಿಯ ಸವಿಸ್ತಾರ ವರದಿಯ ಪ್ರತಿಗಳನ್ನು ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.
ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗುತ್ತಿದ್ದು, ಜನತೆ ವಾರಗಟ್ಟಲೆ ಕತ್ತಲಿನಲ್ಲಿ ಕಳೆಯುವಂತಾಗಿದೆ. ಹೆಸ್ಕಾಂ ಅಧಿಕಾರಿಗಳು ನಗರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದಲ್ಲಿ ನಿಗದಿತ ಅವಧಿಯ ಒಳಗಾಗಿ ಅದನ್ನು ಸರಿಪಡಿಸಬೇಕು. ಕಾಲಮಿತಿಯೊಳಗೆ ವಿದ್ಯುತ್ ಪೂರೈಸಲು ವಿಳಂಬ ಮಾಡುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸುವಂತೆ ಹೆಸ್ಕಾಂ ಅಧಿಕಾರಿಗೆ ಸೂಚಿಸಿದ ಅವರು, ಶಾರ್ಟ್ ಸಕ್ರ್ಯೂಟ್ ತಡೆಯಲು ತಕ್ಷಣವೇ ಜಂಗಲ್ ಕಟಿಂಗ್ ಮಾಡಿಸಬೇಕು ಎಂದು ನಿರ್ದೇಶಿಸಿದರು. ಸಭೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ರೈತರು ತಮ್ಮ ಮನೆ ಸುತ್ತಮುತ್ತ ಜೀವನೋಪಾಯಕ್ಕಾಗಿ ನೆಟ್ಟಿರುವ ಅಡಕೆ ಗಿಡಗಳನ್ನು ಕೀಳಬಾರದು. ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಹೆಚ್ಚಿದ್ದು, ಅನೇಕ ಹಳ್ಳಿಗಳು ಅರಣ್ಯದ ಒಳಗಡೆಯೇ ಇವೆ. ಹೊಸ ಅತಿಕ್ರಮಣವನ್ನು ನಾವು ಬೆಂಬಲಿಸುವುದಿಲ್ಲ, ಆದರೆ ಹಳೆಯ ಅತಿಕ್ರಮಣದಾರರ ಮತ್ತು ರೈತರ ತಂಟೆಗೆ ಅರಣ್ಯ ಅಧಿಕಾರಿಗಳು ಹೋಗಿ ತೊಂದರೆ ನೀಡದಂತೆ ಎಚ್ಚರಿಸಿದರು.
ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಹಳೆಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಕೊಡಬೇಡಿ. ಕೃಷಿಕರು ಅರಣ್ಯ ಸಂರಕ್ಷಿಸಿಕೊಂಡು ತಾವು ಬೆಳೆಯುತ್ತಿದ್ದಾರೆ. ಇಲ್ಲಿನ ರೈತರ ವಿಶ್ವಾಸ ಗಳಿಸದಿದ್ದರೆ ಅರಣ್ಯಕ್ಕೆ ಬೆಂಕಿ ಬಿದ್ದಾಗ ಆರಿಸಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪವಿಭಾಗಾಧಿಕಾರಿ ಚಂದ್ರಶೇಖರ, ತಹಶೀಲ್ದಾರ್ ಪಟ್ಟರಾಜಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವ ಲಕ್ಷ್ಮಣ ಸವದಿ ಅವರು ಶುಕ್ರವಾರ ಶಿರಸಿ ತಾಲೂಕಿನ ಗೌಡಳ್ಳಿ ಬಳಿಯ ನೆರೆಪಿಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಿರಸಿ -ಸಿದ್ದಾಪುರ ಶಾಸಕ ಭೀಮಣ್ಣ ಟಿ ನಾಯ್ಕ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಶಶಿ, SP ದೀಪನ್ ಎಂ.ಎನ್, ಮತ್ತಿತರರು ಇದ್ದರು.
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಎರಡು ದಿನಗಳಿಂದ ನಡೆಸಿದ ಪ್ರಯತ್ನ… Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!