ಮುಖ್ಯಮಂತ್ರಿಗಳ ನಿರ್ದೇಶನದಂತೆ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ, ಇಡೀ ಜಿಲ್ಲೆಯ ಅಧಿಕಾರಿಗಳು ಟೀಮ್ ಆಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಮುಖ್ಯಮಂತ್ರಿಗಳು ನೌಕರರದೊಂದಿಗೆ ನಡೆದ ಸಂವಾದದಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಮಂಗಳವಾರ ಕ್ರಿಮ್ಸ್ ನಲ್ಲಿ ಅಯೋಜಿಸಿದ್ದ ಸರ್ಕಾರಿ ನೌಕರರು ಮತ್ತು ಮುಖ್ಯಮಂತ್ರಿಗಳೊಂದಿಗಿನ ಸಂವಾದ ಸಭೆಯ ನಂತರ, ಜಿಲ್ಲೆಯಲ್ಲಿ ಸರ್ಕಾರಿ ನೌಕರರು ನೀಡಬೇಕಾದ ಸಾರ್ವಜನಿಕ ಸೇವೆಗಳು, ಪಾರದರ್ಶಕ ಆಡಳಿತ ಹಾಗೂ ಇಲಾಖೆಗಳ ಕಾರ್ಯನಿರ್ವಹಣೆ ಕುರಿತು ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ನಿಯೋಜಿತ ಕೇಂದ್ರಸ್ಥಾನದಲ್ಲೇ ಕಡ್ಡಾಯವಾಗಿ ವಾಸಿಸಬೇಕು. ಕೇಂದ್ರಸ್ಥಾನದಿಂದ ಹೊರಗಡೆ ವಾಸವಿದ್ದು, ಕರ್ತವ್ಯ ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಗಸ್ಟ್ 15 ರೊಳಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರು, ಕಚೇರಿ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ವಾಸದ ವಿಳಾಸದ ವಿವರಗಳನ್ನು ಕ್ರೋಢೀಕರಿಸಿ ಅಧಿಕೃತ ಕೈಪಿಡಿ ಸಿದ್ಧಪಡಿಸಲಾಗುವುದು ಎಂದರು.

ಕಚೇರಿಗಳಲ್ಲಿ ಯಾವುದೇ ರೀತಿಯ ಭ್ರಷ್ಠಾಚಾರಕ್ಕೆ ಅವಕಾಶ ನೀಡಬಾರದು. ಭ್ರಷ್ಠಾಚಾರದ ಕುರಿತು ದೂರು ನೀಡಲು ಸಾರ್ವಜನಿಕರಿಗೆ ಕಾಣುವಂತೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಹಾಗೂ ಅಗತ್ಯ ಮಾಹಿತಿಯ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಸಾರ್ವಜನಿಕರಿಂದ ಬರುವ ದೂರುಗಳ ಮೇಲೆ ಮುಖ್ಯಮಂತ್ರಿಗಳ ಕಚೇರಿಯಿಂದಲೂ ನಿಗಾ ವಹಿಸಲಾಗುತ್ತಿದ್ದು, ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಇಲಾಖೆ ರೂಪಿಸಲಾಗಿದ್ದು, ಹಿರಿಯ ಅಧಿಕಾರಿಗಳ ತಂಡ ಇದರ ಮೇಲ್ವಿಚಾರಣೆ ನಡೆಸಲಿದೆ. ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡÀಬೇಕು ಎಂದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಶೇ.100 ರಷ್ಟ್ಟು ಡಿಜಿಟಲೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಅಥವಾ ಇತರ ವಿವರಗಳಲ್ಲಿ ವ್ಯತ್ಯಾಸವಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ತಿದ್ದುಪಡಿ ಮಾಡಿಕೊಳ್ಳಬಹುದು. ಅನಗತ್ಯವಾಗಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕದಂತೆ ಮತ್ತು ಈಗಾಗಲೇ ನಡೆದಿರುವ ಹೆಸರುಗಳ ಡಿಲೀಷನ್‍ಗಳ ಕುರಿತು ಬಿ.ಎಲ್.ಓ ಗಳು ಮರುಪರಿಶೀಲನೆ ನಡೆಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡುವ ನಿರ್ದೇಶನ ಮತ್ತು ಸೂಚನೆಗಳು ಅವರ ಕೆಳಹಂತದ ಸಿಬ್ಬಂದಿಗೂ ತಲುಪಿ, ಅವುಗಳ ಸಮರ್ಪಕ ಅನುಷ್ಠಾನ ಆಗಬೇಕು, ಜಿಲ್ಲೆಯಲ್ಲಿನ ಕರ್ತವ್ಯ ನಿರ್ವಹಣೆ ಬಗ್ಗೆ ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರಿದ್ದು ಅದನ್ನು ಮತ್ತಷ್ಟು ವೃಧ್ದಿಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೇರಿದಂತೆ ಎಲ್ಲಾ ಜಿಲ್ಲಾ ಮಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading