ದೇಶದ ಅಖಂಡತೆ ಸಮಗ್ರತೆ ಕಾಪಾಡಲು ಇಂದು ನಾವು ದೃಢ ಸಂಕಲ್ಪ ಮಾಡಬೇಕಿದೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಶುಕ್ರವಾರ ಸಂಜೆ ಹರ್ ಘರ್ ತಿರಂಗಾ ಆಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವಿಭಜನೆಯ ವಿಭೀಷಿಕಾ ಸ್ಮೃತಿ ದಿವಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ದೇಶದ ವಿಭಜನೆಯನ್ನು ವಿರೋಧಿಸಿದ್ದ ಗಾಂಧೀಜಿಯವರೇ ಮುಂದೆ ವಿಭಜನೆಗೆ ಸಾಕ್ಷಿಯಾಗುವ ಸ್ಥಿತಿ ಬಂತು. ಕಾಂಗ್ರೆಸ್ ನ ಅಂದಿನ ನಾಯಕರೇ ಬ್ರಿಟಿಷರೊಂದಿಗೆ ಸೇರಿ ಸ್ವಾರ್ಥಕ್ಕಾಗಿ ದೇಶ ವಿಭಜಿಸಲು ಕಾರಣರಾದರು. ಒಂದೆಡೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮವಾದರೆ, ಇನ್ನೊಂದೆಡೆ ದೇಶ ವಿಭಜನೆಯ ಮೂಲಕ ಲಕ್ಷಾಂತರ ಜನರ ಬದುಕೇ ಅತಂತ್ರವಾಗುವ ದುಸ್ಥಿತಿ ಎದುರಾಯಿತು. ಈ ವಿಭಜನೆಯ ದುರಂತಕ್ಕೆ ಅಂದಿನ ಕಾಂಗ್ರೆಸ್ ನಾಯಕರ ಮನಸ್ಥಿತಿಯೇ ಕಾರಣ ಎಂದರು.

ಸ್ವಾತಂತ್ರ್ಯ ಪೂರ್ವದಿಂದಲೂ ಮುಸ್ಲೀಮರ ತುಷ್ಟೀಕರಣದಲ್ಲಿ ತೊಡಗಿರುವ ಕಾಂಗ್ರೆಸ್, ಈಗಲೂ ಅದನ್ನು ನಿಲ್ಲಿಸಿಲ್ಲ. ಸತ್ಯವನ್ನು ಹೇಳದೇ ಇತಿಹಾಸವನ್ನೇ ಮರೆಮಾಚುವ ಕಾರ್ಯವನ್ನು ಮಾಡಿತು. ಇದನ್ನೆಲ್ಲ ತಡೆದು, ಭಾರತದ ಪರಮ ವೈಭವದ ಸ್ಥಿತಿಗೆ ಮತ್ತೆ ತಲುಪುವಂತಾಗಲು ಎಲ್ಲರೂ ಸಂಕಲ್ಪ ಮಾಡಬೇಕು. ದೇಶದ ಅಖಂಡತೆ, ಸಮಗ್ರತೆಯ ವಿಚಾರದಲ್ಲಿ ಸಮರ್ಪಿತರಾಗುವ, ಮಾತೃಭೂಮಿ ಋಣ ತೀರಿಸುವ, ದೇಶದ ಸತ್ಪ್ರಜೆಯಾಗಿ ಬದುಕುವ ಪ್ರತಿಜ್ಞೆಯನ್ನು ಮಾಡಬೇಕು. ಪ್ರಧಾನಿ ಮೋದಿಯವರ ಕನಸಿನಂತೆ 2047 ರಲ್ಲಿ ವಿಕಸಿತ, ಸಶಕ್ತ ಭಾರತದ ನಿರ್ಮಾಣಕ್ಕೆ ನಮ್ಮ ಕೊಡುಗೆ ನೀಡಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ವಿಭಜನೆ ಎನ್ನುವುದು ಜನರಲ್ಲಿ ಭೂಮಿ, ಭಾಷೆ, ನೀರು ಇವುಗಳಿಗಾಗಿ ಭಿನ್ನಾಭಿಪ್ರಯ ಬೆಳೆಯುವುದಕ್ಕೆ ನಾಂದಿ ಹಾಡಿತು ದೇಶ ವಿಭಜನೆಯ ಕುರಿತಾದ ಇತಿಹಾಸವನ್ನು ತಿರುಚಲಾಗಿದೆ. ಸತ್ಯವನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತಿದೆ. ಬಂದ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ರಾಷ್ಟ್ರಪ್ರೇಮದ ಜಾಗೃತಿ ಮೂಡಿಸಲು ಮುಂದಾಗಿದೆ. ಪ್ರತಿಯೊಬ್ಬ ನಾಗರಿಕನೂ ದೇಶಾಭಿಮಾನ, ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

ಅಭಿಯಾನದ ಜಿಲ್ಲಾ ಸಂಚಾಲಕ ಸುಬ್ರಾಯ ವಾಳ್ಕೆ, ಜಿ.ಪಂ ಮಾಜಿ ಸದಸ್ಯ ಎಲ್.ಟಿ.ಪಾಟೀಲ ಉಪಸ್ಥಿತರಿದ್ದರು.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading