ಶ್ರಾವಣ ಮಾಸದ ಎರಡನೇ ಶುಕ್ರವಾರ-ದಿನಾಂಕ: 21-08-2026 ರಂದು ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಬೇಕೆಂದು ಸ್ವರ್ಣವಲ್ಲೀ ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರಾವಣಮಾಸದ ಶುಕ್ಲಪಕ್ಷದ ಶುಕ್ರವಾರ ವರಮಹಾಲಕ್ಷ್ಮೀವ್ರತವನ್ನು ಆಚರಿಸಬೇಕೆನ್ನುವ ವಿಷಯವು ಎಲ್ಲರಿಗೂ ಸಮ್ಮತವಾದದ್ದೇ ಆಗಿದೆ. ಆದರೆ ಎಷ್ಟನೇ ಶುಕ್ರವಾರ ಈ ಅನುಷ್ಠಾನವನ್ನು ಮಾಡಬೇಕೆಂಬ ವಿಚಾರದಲ್ಲಿ ಕೆಲ ವಿಷಯಗಳು ಚಿಂತನೀಯವಾಗಿವೆ.

“ನಭೋ ಮಾಸೇ ಪೂರ್ಣಿಮಾಯಾಮಂತಿಕಸ್ಥೇ ಭೃಗೋರ್ದಿನೇ|
ಮತ್ಪೂಜಾ ತತ್ರ ಕರ್ತವ್ಯಾ ಸರ್ವಸಿದ್ಧಿಪ್ರದಾಯಿನೀ” (ವ್ರತರತ್ನ)
“ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾಂತ್ಯಭಾರ್ಗವೇ|
ವರಲಕ್ಷ್ಮ್ಯಾ ವ್ರತಂ ಕಾಯರ್ಂ ಸರ್ವಸಿದ್ಧಿಪ್ರದಾಯಕಮ್” (ಕಲ್ಪಚಿಂತಾಮಣಿ)

ಈ ಎಲ್ಲ ವರಲಕ್ಷ್ಮೀವ್ರತದವಿಧಾಯಕ ವಾಕ್ಯಗಳಲ್ಲಿ ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಿರುವ ಶುಕ್ರವಾರದಂದು ವ್ರತಾನುಷ್ಠಾನವನ್ನು ಮಾಡಬೇಕೆಂದು ಸಾಮಾನ್ಯವಾಗಿ ಹೇಳಲಾಗಿದೆ. ಆದರೆ ಒಂದು ವೇಳೆ ಮೂರು ಶುಕ್ರವಾರಗಳು ಬಂದಾಗ ಹೇಗೆ ಎನ್ನುವ ಕುರಿತಾಗಿ ಇಲ್ಲಿ ಉಲ್ಲೇಖಗಳು ಇಲ್ಲ. ಆದರೆ ವ್ರತಚೂಡಾಮಣ್ಯಾದಿಗ್ರಂಥಗಳಲ್ಲಿ ಶ್ರಾವಣಮಾಸದ ಎರಡನೇ ಶುಕ್ರವಾರವೇ ಅನುಷ್ಠಾನವನ್ನು ಮಾಡಬೇಕೆಂದು ಬೋಧಿಸುವ ವಚನಗಳಿವೆ.

“ಶ್ರಾವಣೇ ಶುಕ್ಲಪಕ್ಷೇ ತು ದ್ವಿತೀಯೇ ಭೃಗುವಾಸರೇ” (ವ್ರತಚೂಡಾಮಣಿ)
“ಯದಾ ತು ಶ್ರಾವಣೇ ಮಾಸೇ ದ್ವಿತೀಯೋ ಭಾರ್ಗವೋ ಭವೇತ್|
ತಸ್ಮಿನ್ ದಿನೇ ಮಹಾಲಕ್ಷ್ಮೀಂ ಪೂಜಯೇದ್ಭಕ್ತಿಸಂಯುತಃ||”
ಹಾಗಾದರೆ “ಸಾಮಾನ್ಯೇ ಶ್ರುತಸ್ಯ ವಿಶೇಷೇ ಉಪಸಂಹಾರಃ” ಎಂಬ ಮೀಮಾಂಸಾನ್ಯಾಯವನ್ನು ಇಲ್ಲಿ ಅನುಸರಿಸಬಹುದಾಗಿದೆ.

ಪೂರ್ಣಮಾಸೇಷ್ಟಿಯ ಪ್ರಕರಣದಲ್ಲಿ “ಪುರೋಡಾಶಂ ಚತುರ್ಧಾ ಕರೋತಿ” ಎಂಬ ವಾಕ್ಯವಿದೆ. ಆ ಕರ್ಮದಲ್ಲಿ ಆಗ್ನೇಯಪುರೋಡಾಶ ಮತ್ತು ಅಗ್ನೀಷೋಮೀಯ ಪುರೋಡಾಶಗಳು ಎಂದು ಎರಡು ಪುರೋಡಾಶಗಳಿರುತ್ತವೆ. ಹಾಗಿದ್ದಾಗ ಯಾವ ಪುರೋಡಾಶವನ್ನು ವಿಂಗಡಿಸಬೇಕು ಎಂಬ ಜಿಜ್ಞಾಸೆಯುಂಟಾದಾಗ “ಆಗ್ನೇಯಂ ಚತುರ್ಧಾ ಕರೋತಿ” ಎಂಬ ಇನ್ನೊಂದು ವಾಕ್ಯದಿಂದ ಆಗ್ನೇಯ ಪುರೋಡಾಶವನ್ನೇ ನಾಲ್ಕಾಗಿ ವಿಂಗಡಿಸಬೇಕು ಎಂದು ವಿಶೇಷವಾಗಿ ತಿಳಿಯಬರುತ್ತದೆ. ಅಂತೆಯೇ ಇಲ್ಲೂ ಕೂಡಾ ಸಾಮಾನ್ಯವಾಗಿ ವ್ರತರತ್ನಾದಿಗಳಲ್ಲಿ ಪೂರ್ಣಿಮೆಯ ಹತ್ತಿರದ ಶುಕ್ರವಾರವೆಂದು ಹೇಳಲ್ಪಟ್ಟಿದೆ.

ಆದರೆ ಕೆಲವೊಂದು ಬಾರಿ ಎರಡು ಶುಕ್ರವಾರಗಳು, ಕೆಲವೊಮ್ಮೆ ಮೂರು ಶುಕ್ರವಾರಗಳು ಬರುವ ಸಾಧ್ಯತೆಗಳಿರುತ್ತವೆ. ಸ್ಕಂದಪುರಾಣದಲ್ಲಿ ಅಂತಿಮ ಶುಕ್ರವಾರವೆಂಬುದಾಗಿ ಹೇಳಿದ್ದರೂ ಕೂಡಾ ವ್ರತ ಚೂಡಾಮಣಿ ಇತ್ಯಾದಿ ಗ್ರಂಥಗಳಲ್ಲಿ ಎರಡನೇ ಶುಕ್ರವಾರವೇ ಮಾಡಬೇಕು ಎಂಬ ವಿಶೇಷವಿಧಿಗಳಿರುವದರಿಂದ ಸಾಮಾನ್ಯವಿಶೇಷನ್ಯಾಯದಿಂದ ಒಂದೊಮ್ಮೆ ಮೂರು ಶುಕ್ರವಾರಗಳು ಶುಕ್ಲಪಕ್ಷದಲ್ಲಿ ಬಂದ ಸಂದರ್ಭದಲ್ಲೂ ಎರಡನೇ ಶುಕ್ರವಾರವೇ ಅನುಷ್ಠಾನವನ್ನು ಮಾಡಬೇಕೆಂಬ ಅರ್ಥವು ತೋರುತ್ತದೆ.

ಹಾಗಾದರೆ ವ್ರತನಿರ್ಣಯಕಲ್ಪವಲ್ಲಿಯಲ್ಲಿ “ಯದಾ ಪೂರ್ಣಿಮಾಯಾಮೇವ ಭೃಗುವಾರಃ ಸಂಭವತಿ, ತಸ್ಮಿನ್ನೇವ ದಿನೇ ವರಲಕ್ಷ್ಮೀವ್ರತಂ ಕಾರ್ಯಮ್| ನೋಪಾಂತಭಾರ್ಗವದಿನೇ| ಉಕ್ತಂ ಚ ಕೌಮುದ್ಯಾಮ್ –
“ಯಸ್ಮಿನ್ ವೈ ಶ್ರಾವಣೇ ಮಾಸಿ ಶುಕ್ಲಾಂತೇ ತು ಭೃಗೋರ್ದಿನೇ|
ಪ್ರಾರಭ್ಯ ತದ್ವ್ರತಂ ತತ್ರ ವರಲಕ್ಷ್ಮ್ಯಾ ಯತಾತ್ಮಭಿಃ||” (ಕೌಮುದೀ)
ಯಾವಾಗ ಪೂರ್ಣಿಮಾ ತಿಥಿಯಂದೇ ಶುಕ್ರವಾರವಿರುತ್ತದೆಯೋ ಆಗ ಆ ಶುಕ್ರವಾರದಂದೇ ವ್ರತವನ್ನು ಆಚರಿಸಬೇಕು ಎಂದು ಹೇಳಿದೆಯಲ್ಲ. ಇದು ಪೂರ್ವೋಕ್ತ ಅರ್ಥಕ್ಕೆ ವಿರುದ್ಧವಲ್ಲವೇ? ಎಂಬ ಪ್ರಶ್ನೆಗೆ ಉತ್ತರವನ್ನು ಈ ರೀತಿಯಾಗಿ ನೀಡಬಹುದಾಗಿದೆ – “ಪಕ್ಷದಲ್ಲಿ ತಿಥಿಹ್ರಾಸವಾಗಿ 14ದಿನಗಳ ಪಕ್ಷವಾಗಿದ್ದು, ಎರಡನೆಯ ಶುಕ್ರವಾರವೇ ಪೂರ್ಣಿಮಾ ತಿಥಿಯು ರಾತ್ರಿಪಯರ್ಂತವಾಗಿಯೂ ವ್ಯಾಪಿಸಿದಾಗ ಆ ಹುಣ್ಣಿಮೆಯ ದ್ವಿತೀಯಶುಕ್ರವಾರವೇ ಅನುಷ್ಠಾನ ಮಾಡತಕ್ಕದ್ದು” ಎಂಬ ಅರ್ಥಪರಕವಾದ ವಾಕ್ಯವೆಂದು ಸ್ವೀಕರಿಸಬೇಕು.

ಏಕೆಂದರೆ ಇದೇ ಅರ್ಥವನ್ನು ನೀಡುವ “ನಿಶಾಸ್ಯವ್ಯಾಪಿನೀ ಗ್ರಾಹ್ಯಾ ಪೂರ್ಣಿಮಾ ಯದಿ ಭಾರ್ಗವೇ| ನೋ ಚೇದರ್ವಾಕ್ ಭೃಗೋರ್ವಾರೇ ವರಲಕ್ಷ್ಮೀವ್ರತಂ ಚರೇತ್||” ಎಂಬ ಪುರಾಣವಚನವನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. “ಶಾಸ್ತ್ರಸ್ವರೂಪಂ ಬಹವೋsಪಿ ಬುದ್ಧ್ವಾ ವದಂತಿ ಯಚ್ಚಾನುಮತಂ ಹಿತಂ ನಃ||” ಎನ್ನುವ ಶ್ರೀಪತಿದೈವಜ್ಞನ ಉಕ್ತಿಯಂತೆ ಅನೇಕ ಶಾಸ್ತ್ರವಾಕ್ಯಗಳಿದ್ದರೂ ಕೂಡ ಪ್ರಾಜ್ಞರಾದವರು(ಶಿಷ್ಟರು) ನಮ್ಮ ಕುಲಪರಂಪರೆಗೋ ದೇಶಾಚಾರಕ್ಕೋ ಸಂವಾದಿಯಾಗುವ ಪ್ರಮಾಣಗಳನ್ನೇ ಪುರಸ್ಕರಿಸಿ ನಿರ್ಣಯಿಸಿರುತ್ತಾರೆ. ಶಾಸ್ತ್ರಗಳಲ್ಲಿ ಕೆಲವೊಮ್ಮೆ ಒಂದೇ ವಿಷಯಕ್ಕೆ ಸಂಬಂಧಿಸಿ ವಿಧಿಗಳು ಮತ್ತು ನಿಷೇಧಗಳು, ಉತ್ಸರ್ಗಗಳು ಹಾಗೂ ಅಪವಾದವಚನಗಳು ಅನೇಕಕಡೆಗಳಲ್ಲಿರುತ್ತವೆ. ಅಂತಹ ಸನ್ನಿವೇಶಗಳಲ್ಲಿ ಕೇವಲ ವಚನವೊಂದನ್ನೇ ಅವಲಂಬಿಸಿ ನಿರ್ಧರಿಸದೇ ನಮ್ಮ ಪೂರ್ವಜರು ಯಾವುದನ್ನು ಒಪ್ಪಿ ಆಚರಿಸುತ್ತಿದ್ದಾರೆ ಎಂದು ನೋಡಬೇಕಾಗುತ್ತದೆ.

ಉದಾಹರಣೆಗಾಗಿ…
“ಪುನರ್ವಸೌ ಕೃತೋ ವಿಪ್ರಃ ಪುನಃ ಸಂಸ್ಕಾರಮರ್ಹತಿ” ಎಂದು ಉಪನಯನ ಪ್ರಕರಣದಲ್ಲಿ ಉಕ್ತವಾದ ಸ್ಮೃತಿವಚನ. ಪುನರ್ವಸು ನಕ್ಷತ್ರದಂದು ವಿಪ್ರನ ಉಪನಯನವನ್ನು ಮಾಡಿದರೆ ಅದು ವ್ಯರ್ಥವೇ ಸರಿ. ಆದ್ದರಿಂದ ಮತ್ತೊಮ್ಮೆ ಆ ವಟುವಿಗೆ ಉಪನಯನವನ್ನು ವಿಧಿವತ್ತಾಗಿ ಮಾಡಬೇಕೆಂದು ಈ ವಾಕ್ಯವು ಬೋಧಿಸುತ್ತದೆಯಾದರೂ ನಿಬಂಧಕಾರರು(ಬಾಲಂಭಟ್ಟೀ) “ದೇಶಾಚಾರತೋ ವ್ಯವಸ್ಥಾ, ಇದಂ ಪ್ರಾಚ್ಯೈರೇವ ಆದೃತಮ್” ಎಂದು ಪೂರ್ವಭಾರತದಲ್ಲಿ ಮಾತ್ರವೇ ಇದು ಕಂಡುಬರುವ ಆಚರಣೆಯೇ ಹೊರತಾಗಿ ಎಲ್ಲ ದೇಶಗಳಲ್ಲಿಯೂ ಅನ್ವಯಿಸತಕ್ಕದ್ದಲ್ಲ ಎಂದಿದ್ದಾರೆ.

ಜ್ಯೇಷ್ಠ ಪುತ್ರನಿಗೆ ಜ್ಯೇಷ್ಠಮಾಸ ನಿಷೇಧ – “ಜ್ಯೇಷ್ಠಮಾಸೇ ವಿಶೇಷೇಣ ಸರ್ವಜ್ಯೇಷ್ಠಸ್ಯ ಚೈವ ಹಿ| ಉಪನೀತಸ್ಯ ಪುತ್ರಸ್ಯ ಜಡತ್ವಂ ಮೃತ್ಯುರೇವ ಚ||”, “ನ ಜನ್ಮಧಿಷ್ಣ್ಯೇ ನ ಚ ಜನ್ಮಮಾಸೇ ನ ಜನ್ಮಕಾಲೀನದಿನೇ ವಿದಧ್ಯಾತ್| ಜ್ಯೇಷ್ಠೇ ನ ಮಾಸಿ ಪ್ರಥಮಸ್ಯ ಸುನೋಃ ತಥಾ ಸುತಾಯಾ ಅಪಿ ಮಂಗಲಾನಿ||”. ಈ ವಾಕ್ಯಗಳಲ್ಲಿ ಜ್ಯೇಷ್ಠಪುತ್ರನ/ಪುತ್ರಿಯ ಮಂಗಲಕಾರ್ಯವನ್ನು ಜ್ಯೇಷ್ಠಮಾಸದಲ್ಲಿ ನಿಷೇಧಿಸಿದ್ದು ಕಂಡುಬರುತ್ತದೆ. ಆದರೆ ಬೃಹಸ್ಪತಿ ವಚನವೊಂದರಲ್ಲಿ “ಮಿಥುನೇ ಸಂಸ್ಥಿತೇ ಭಾನೌ ಜ್ಯೇಷ್ಠಮಾಸೋ ನ ದೋಷಕೃತ್” (ಸಂಸ್ಕಾರಭಾಸ್ಕರ) ಒಂದು ವೇಳೆ ಮಿಥುನತಿಂಗಳಿನಿಂದ ಕೂಡಿದ ಜ್ಯೇಷ್ಠಮಾಸವಿದ್ದಲ್ಲಿ ಜ್ಯೇಷ್ಠಪುತ್ರಾದಿಗಳ ಸಂಸ್ಕಾರಗಳನ್ನು ಮಾಡುವುದಕ್ಕೆ ದೋಷವಿಲ್ಲವೆಂದು ಹೇಳಿದ್ದಾರೆ.

ಈ ರೀತಿಯಾಗಿ ಜ್ಯೇಷ್ಠಮಾಸಕ್ಕೆ ಕ್ವಚಿತ್ ಅದೋಷತ್ವವನ್ನು ಹೇಳುವ ವಚನವಿದ್ದರೂ ಸಹ ನಮ್ಮ ಪ್ರದೇಶದಲ್ಲಿ ಜ್ಯೇಷ್ಠಪುತ್ರನ/ಪುತ್ರಿಯ ಸಂಸ್ಕಾರಕರ್ಮಗಳಿಗೆ ಜ್ಯೇಷ್ಠಮಾಸವನ್ನು ಸರ್ವಥಾ ತ್ಯಜಿಸಿದ್ದಾರೆ. ಅಂದರೆ ಜ್ಯೇಷ್ಠಮಾಸದ ನಿಷೇಧಕವಾಕ್ಯವನ್ನೇ ನಮ್ಮ ಪ್ರದೇಶದ ಪೂರ್ವಜರು ಮಾನ್ಯ ಮಾಡಿದ್ದಾರೆಂಬುದು ಸ್ಪಷ್ಟ. ಇವೆಲ್ಲ ಉದಾಹರಣೆಗಳಿಂದ ತಿಳಿದುಬರುವದೇನೆಂದರೆ ಶಾಸ್ತ್ರದಲ್ಲಿ ನಾನಾವಿಧವಾದ ವಚನಗಳಿದ್ದಾಗ ನಮ್ಮ ಪರಂಪರೆಯು ಯಾವುದನ್ನು ಮಾನ್ಯಮಾಡಿದೆ ಎಂಬುದನ್ನು ಆಲೋಚಿಸಿ ಧರ್ಮದ ಕುರಿತಾಗಿ ನಿರ್ಣಯಿಸಬೇಕಾಗುತ್ತದೆ. ಇಲ್ಲೀಗ ಪ್ರಕೃತವಿಚಾರದಲ್ಲಿ ನಮ್ಮ ಪ್ರದೇಶದಲ್ಲಿ ದ್ವಿತೀಯ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತದ ಅನುಷ್ಠಾನಪಕ್ಷವನ್ನು ಪುರಸ್ಕರಿಸುತ್ತ ಬಂದಿದ್ದಾರೆ ಎನ್ನುವುದಕ್ಕೆ ಈ ಕೆಲ ವರ್ಷಗಳಲ್ಲಿ ನೀಡಿದ ನಿರ್ಣಯವನ್ನು ಗಮನಿಸಬಹುದಾಗಿದೆ.

1876ನೇ ಗತಶಕೆ ಜಯ ಸಂವತ್ಸರದಲ್ಲಿ ಮೂರನೆಯ ಶುಕ್ರವಾರವು ಚತುರ್ದಶಿಯಂದು ಬಂದಿದ್ದಾಗಲೂ ದ್ವಿತೀಯ ಶುಕ್ರವಾರವೇ(6-8-1954) ವರಮಹಾಲಕ್ಷ್ಮೀವ್ರತವನ್ನು ಮಾಡಬೇಕೆಂದು ನಿರ್ಣಯಿಸಿದ್ದರು.
1920ನೇ ಗತಶಕೆ ಬಹುಧಾನ್ಯ ಸಂವತ್ಸರದಲ್ಲಿ ಮೂರನೆಯ ಶುಕ್ರವಾರವು ಚತುರ್ದಶಿಯಂದು ಬಂದಿದ್ದಾಗಲೂ ದ್ವಿತೀಯ ಶುಕ್ರವಾರವೇ(24-7-1998) ವರಮಹಾಲಕ್ಷ್ಮೀವ್ರತವನ್ನು ಮಾಡಬೇಕೆಂದು ಬಗ್ಗೋಣ ಪಂಚಾಗದಲ್ಲಿ ಸೂಚಿಸಿದ್ದರು.

ಹಾಗಾಗಿ ಈ ವರ್ಷದಲ್ಲೂ ಮೂರು ಶುಕ್ರವಾರಗಳು ಬಂದಿದ್ದರೂ ಸಹ ಎರಡನೆಯ ಶುಕ್ರವಾರವೇ ವ್ರತಾನುಷ್ಠಾನಕಾಲವೆಂಬುದು ಸೂಕ್ತವಾಗುತ್ತದೆ. ಒಟ್ಟಿನಲ್ಲಿ ಈ ಮೇಲಿನ ಎಲ್ಲ ಅಂಶಗಳಿಂದ ತಿಳಿದು ಬರುವ ವಿಷಯವೇನೆಂದರೆ – ಶ್ರಾವಣಮಾಸದ ದ್ವಿತೀಯ ಶುಕ್ರವಾರವು ವರಮಹಾಲಕ್ಷ್ಮೀವ್ರತಕ್ಕೆ ವಿಹಿತವಾದ ಕಾಲವು. ಆದ್ದರಿಂದ ಒಂದು ವೇಳೆ ಶುಕ್ಲ ಪಕ್ಷದಲ್ಲಿ ಮೂರು ಶುಕ್ರವಾರಗಳು ಬಂದಿದ್ದರೂ ಸಹ ಎರಡನೆಯ ಶುಕ್ರವಾರದಂದೇ ಅನುಷ್ಠಾನವನ್ನು ಮಾಡಬೇಕಾಗುತ್ತದೆ.

ನಿರ್ಣಯ – ಈ ಪರಾಭವ ಸಂವತ್ಸರದಲ್ಲಿ ಬಗ್ಗೋಣ ಪಂಚಾಗದಲ್ಲಿ ಸೂಚಿಸಿರುವಂತೆ ಎರಡನೆಯ ಶುಕ್ರವಾರವೇ (21-8-2026) ವರಮಹಾಲಕ್ಷ್ಮೀವ್ರತವನ್ನು ಆಚರಿಸುವದು ಬಗ್ಗೋಣ ಪಂಚಾಂಗವನ್ನು ಅನುಸರಿಸುವವರಿಗೆ ಅತ್ಯಂತ ಶಾಸ್ತ್ರೀಯವಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading