ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
ಸ್ವಾತಂತ್ರ್ಯ ಬ್ರಿಟಿಷರ ಕೊಡುಗೆಯಲ್ಲ, ಅದರ ಹಿಂದೆ ನಮ್ಮ ಹಿರಿಯರ ಹೋರಾಟ, ತ್ಯಾಗ, ಬಲಿದಾನಗಳು ಇವೆ ಎಂದು ವಾಯು ಪಡೆಯ ನಿವೃತ್ತ ಯೋಧ ಮಹಾದೇವಚಂದ್ರ ಪಂಡರಾಪುರ ಹೇಳಿದರು.
ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ನೂರಾರು ವರ್ಷಗಳ ಪರಕೀಯರ ದಾಸ್ಯದ ಸಂಕೋಲೆ ಮುರಿದ ದಿನ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ನಾವು ಅನೇಕ ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದೇವೆ. ದೇಶ ಸೇವೆ ಎಂದರೆ ನಮ್ಮಲ್ಲಿರುವ ಕೆಲಸಗಳನ್ನು ಶ್ರೇಷ್ಠವಾಗಿ ನಿರ್ವಹಿಸುವುದು. ನಾವು ಇಲ್ಲಿ ಕ್ಷೇಮವಾಗಿರಲು ಸೈನಿಕರು ಹಗಲು ರಾತ್ರಿ ಗಡಿಯಲ್ಲಿ ಶ್ರಮಿಸುತ್ತಾರೆ. ಇಂದು ಯುವಕರು ಸೇನೆಗೆ ಹೆಚ್ಚು ಸೇರಬೇಕಿದೆ. ತಂತ್ರಜ್ಞಾನ ಬೆಳೆದಿರುವುದರಿಂದ ಸುಲಭವಾಗಿ ಮಾಹಿತಿಗಳು ಸಿಗುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗುತ್ತಿವೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇದ್ದ 500 ಸಂಸ್ಥಾನಗಳನ್ನು ಒಂದು ಗೂಡಿಸಿದ ಮಹಾನ್ ಚೇತನಗಳನ್ನು ಈ ಸಂರ್ಭದಲ್ಲಿ ಸ್ಮರಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದರೂ ನಮ್ಮಲ್ಲಿ ಎರಡು ಸಂವಿಧಾನದ ಎರಡು ಧ್ವಜಗಳಿದ್ದವು. 370 ವಿಧಿಯ ರದ್ದು ಪಡಿಸುವ ಮೂಲಕ ಕಾಶ್ಮೀರವನ್ನು ಸೇರಿಸಿ ಅಖಂಡ ಭಾರತ ರೂಪಿಸುವ ಕನಸು ಸಾಕಾರಗೊಂಡಿತು ಎಂದರು. ಈ ಸಂದರ್ಭದಲ್ಲಿ ಎಲ್ಲ ವಿಭಾಗಗಳು ಮುಖ್ಯಸ್ಥರ ಶಿಕ್ಷಕರು, ಉಪನ್ಯಾಸಕರು, ಪಾಲಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ ಅವರು ಸ್ವಾಗತಿಸಿದರು. ಶಿವಪ್ರಸಾದ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಜಾಕಿರ ವಂದಿಸಿದರು.
ಜಯಕರ್ನಾಟಕ ಸಂಘಟನೆಯಿಂದ ಕಿರವತ್ತಿಯಲ್ಲಿ ಧ್ವಜಾರೋಹಣ
ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಶನಿವಾರ ಜಯಕರ್ನಾಟಕ ಸಂಘಟನೆಯ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯು ಅದ್ದೂರಿಯಾಗಿ ನಡೆಯಿತು.
ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ನಮ್ಮ ಹಿರಿಯರು ಹೋರಾಟದ ಮೂಲಕ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳಬೇಕಿದೆ. ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ನಮ್ಮ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರು ಇದ್ದರು.