ಯಲ್ಲಾಪುರ ತಾಲೂಕಿನ ಅರಬೈಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಮ್ ಸಿ ಅಧ್ಯಕ್ಷ ನಾಗರಾಜ ಭಟ್ಟ ನೆರವೇರಿಸಿದರು. ನಿವೃತ್ತ ಯೋಧ ಅರಬೈಲಿನ ನೀಲಕಂಠ ವಿಶ್ವನಾಥ ನಾಯ್ಕ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.

ಶಾಲೆಯ ಮುಖ್ಯಾಧ್ಯಾಪಕಿ, ಸಾಹಿತಿ ಶಿವಲೀಲಾ ಹುಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಗಸ್ಟ್ 15 ರಂದು ಆಚರಿಸಲಾಗುವ ಸ್ವಾತಂತ್ರ್ಯ ದಿನಾಚರಣೆಯು ಭಾರತದ ರಾಷ್ಟ್ರೀಯ ಹಬ್ಬವಾಗಿದೆ. 1947ರ ಈ ದಿನದಂದು ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ನವದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಧ್ವಜಾರೋಹಣ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗಯೋಗಿಗಳನ್ನು ನೆನೆಯುವ ಈ ದಿನವು ದೇಶಪ್ರೇಮ ಮತ್ತು ಐಕ್ಯತೆಯನ್ನು ಸಾರುತ್ತದೆ ಮತ್ತು ನಾವೆಲ್ಲರೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಸಂವಿಧಾನ ಮತ್ತು ಕಾನೂನನ್ನು ಗೌರವಿಸಬೇಕು. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು. ಸರಕಾರಿ ಶಾಲೆಗಳು ಹಳ್ಳಿ ಹಳ್ಳಿಗಳಲ್ಲಿ ತುಂಬಿ ತುಳುಕುವಂತೆ ಆಗಲಿ ಎಂದರು.

ಮಾಜಿ ಕ್ಯಾಪ್ಟನ್, ಅರಬೈಲಿನ ನೀಲಕಂಠ ವಿಶ್ವನಾಥ ನಾಯ್ಕ ಮಾತನಾಡಿ, ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡರು. ಪ್ರಾಥಮಿಕ ಶಿಕ್ಷಣ ನಮ್ಮನ್ನು ದೇಶದ ಸೇವೆ ಮಾಡಲು ಪ್ರೇರಣೆ ನೀಡಿತು. ಸರಕಾರಿ ಶಾಲೆಯಲ್ಲಿ ಮಕ್ಕಳು ಕಲಿಯಬೇಕು ಮತ್ತು ಪಾಲಕರು ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಹೇಳಿ ಕೊಡಬೇಕು. ಶಿಕ್ಷಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರಬೇಕು.ದೇಶ ಕಾಯುವ ಸೈನಿಕನಾಗಲು ದೇಶ ಪ್ರೇಮ ಸದಾ ಜಾಗೃತವಾಗಿರಬೇಕು.ಅರಬೈಲ್ ಶಾಲೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಪಡೆದಿದೆ.ಹೀಗೆ ಈ ಶಾಲೆಯ ಕೀರ್ತಿ ಹೆಚ್ಚಾಗಲಿ ಎಂದು ಹಾರೈಸುತ್ತೆನೆ ಎಂದರು.

ಈ ಸಂದರ್ಭದಲ್ಲಿ ಇಂಡಿಯಾ ಗೇಟ್ ಮಾಡೆಲ್ ಅನ್ನು ಶಾಲೆಯ ಶಿಕ್ಷಕ ವೃಂದ ವಿಶೇಷವಾಗಿ ಸಿದ್ದಪಡಿಸಿತ್ತು.ಛದ್ಮವೇಶ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಧನ್ಯಾ ಮಾರುತಿ ನಾಯ್ಕ ( ಝಾನ್ಸಿ ರಾಣಿ ಲಕ್ಷ್ಮೀಬಾಯಿ) ದ್ವಿತೀಯ ಲೋಹಿತ್ ಲೋಕೇಶ ಮರಾಠೆ( ಬಾಬಾ ಸಾಹೇಬ್ ಅಂಬೇಡ್ಕರ್) ತೃತೀಯ ಆರ್ಯ ನಾಗರಾಜ ಭಟ್ಟ( ಮಹಾತ್ಮ ಗಾಂಧಿ) ಬಹುಮಾನ ಪಡೆದರು. ತೇಜಸ್ ಮಂಜುನಾಥ ಬಾಂದಿ,ಪ್ರಜ್ವಲ್ ಕಿರಣ ರಾಣೆ,ಇಂಚರಾ ದತ್ತಾತ್ರೇಯ ಭಟ್ಟ, ಕೋಮಲ್ ದಿನೇಶ ನಾಯ್ಕ ಸಮಾಧಾನಕರ ಬಹುಮಾನ ಪಡೆದವರು.

ಅಧ್ಯಕ್ಷತೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ನಾಗರಾಜ ಭಟ್ಟ, ಅತಿಥಿಗಳಾಗಿ ಉಪಾಧ್ಯಕ್ಷರಾದ ಉಮಾ ಗೌಡ,ಗುರುರಾಜ ಆಚಾರಿ, ವಿಶ್ವೇಶ್ವರ ಹೆಗಡೆ,ತ್ರೇಷಾ ನೋಹಾ ಭಾಗವಹಿಸಿದ್ದರು. ಮಕ್ಕಳು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಭಾಷಣಗಳನ್ನು ದೇಶಭಕ್ತಿಗೀತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಪಾಲಕರು, ಮಾಜಿ ವಿದ್ಯಾರ್ಥಿಗಳು, ಊರಿನ ಹಿರಿಯರು, ಶಿಕ್ಷಣಪ್ರೇಮಿಗಳು,ಅಂಗನವಾಡಿ ಮಕ್ಕಳು, ಪಾಲಕರು ಉಪಸ್ಥಿತರಿದ್ದರು. ಮಕ್ಕಳಿಗೆ ಸಿಹಿಯನ್ನು ನೀಡಿ ಸಂಭ್ರಮಿಸಿದರು. ಹರಿಹರ ಸಿದ್ದಿ ಸ್ವಾತಂತ್ರ್ಯೋತ್ಸವಕ್ಕೆ ಅವಶ್ಯ ಬಟ್ಟೆಯ ಪರಪರೆಯನ್ನು ತಂದು ಅಲಂಕರಿಸಿದ್ದು ವಿಶೇಷವಾಗಿತ್ತು. ಏಳನೇ ತರಗತಿ ವಿದ್ಯಾರ್ಥಿನಿ ಪವಿತ್ರಾ ಹರಿಹರ ಸಿದ್ದಿ ನಿರ್ವಹಿಸಿದಳು ಸ್ವಾಗತ ಮತ್ತು ನಿರೂಪಣೆಯನ್ನು ಸ್ಕೌಟ್ ಗೈಡ್ ಶಿಕ್ಷಕ ಮಹೇಶ ಭಟ್ಟ ನಿರ್ವಹಿಸಿದರು. ಕ್ರೀಡಾಪಟು ಶಿಕ್ಷಕರಾದ ವೀಣಾ ದೇವಾಡಿಗ ವಂದಿಸಿದರು.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading