ಪೂಜೆ, ಜಪ, ಧ್ಯಾನದಲ್ಲಿ ಏಕಾಗ್ರತೆ ಇರಲಿ: ಸ್ವರ್ಣವಲ್ಲೀ ಶ್ರೀ
ದೇವರ ಪೂಜೆ, ಧ್ಯಾನ, ಜಪ ಮಾಡುವ ಸಂದರ್ಭದಲ್ಲಿ ಏಕಾಗ್ರತೆ ಇರಬೇಕು, ಚಂಚಲ ಮನಸ್ಥಿತಿ ಇರಬಾರದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಸ್ವರ್ಣವಲ್ಲೀ ಮಠದ ಸುಧರ್ಮ ಸಭಾಭವನದಲ್ಲಿ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿ, ಅರ್ಚನೆ, ಜಪ, ಧ್ಯಾನ, ಮನೋಲಯ ಇವು ಜೀವನ ಸಾಧನೆಗೆ ಬೇಕಾದ ಅಗತ್ಯ ಆಧ್ಯಾತ್ಮದ ಮಾರ್ಗಗಳಾಗಿವೆ. ಶಾಂತ ಮನಸ್ಸಿನಿಂದ, ದೇವರ ಸಾನ್ನಿಧ್ಯದ ಚಿಂತನೆಯೊಂದಿಗೆ ಪೂಜೆ ಮಾಡಿದರೆ ಯುಕ್ತವಾದ, ಉತ್ತಮ ಫಲ ದೊರೆಯುತ್ತದೆ.
ತನ್ನ ಸೋಲಿನಲ್ಲಿ ಸಮತೆ ಇರಬೇಕು, ಪರರ ಗೆಲುವಿನಲ್ಲಿ ಮತ್ಸರ ಇರಬಾರದು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ನಾನಾ ಕಾರಣಗಳಿಂದ ಮನೆ, ಮನೆಗಳಲ್ಲಿ ಇಂದು ಅಧರ್ಮ ಪ್ರವೇಶ ಮಾಡುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ನಾವು ಧರ್ಮ ಮಾರ್ಗದಲ್ಲಿ ನಡೆದು, ಮಕ್ಕಳಿಗೆ ಸರಿಯಾಗಿ ಮಾರ್ಗರ್ಶನ ಮಾಡಬೇಕು, ಧರ್ಮಶ್ರದ್ಧೆಯನ್ನು ಬೆಳೆಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಮಕ್ಕಳಿಗೆ ಸೂಕ್ತ ವಯಸ್ಸಿನಲ್ಲಿ, ಶಾಸ್ತ್ರೋಕ್ತವಾಗಿ ವಿವಾಹ ಮಾಡಬೇಕು ಎಂದರು.
ಜನ ಜೀವನಕ್ಕೆ ಮಾರಕವಾದ ಬೇಡ್ತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಪತ್ರ ಚಳುವಳಿ ನಡೆಯುತ್ತಿದ್ದು, ಸಾರ್ವಜನಿಕರು ಇದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು. ಸಭೆಯಲ್ಲಿ ಕಿರಿಯ ಶ್ರೀಗಳಾದ ಶ್ರೀಮದ್ ಆನಂದ ಬೋಧೆಂದ್ರ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದರು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಿವಳ್ಳಿ ಸೀಮಾ ಭಕ್ತರಿಂದ ಗುರುಪಾದಪೂಜೆ, ಗಾಯತ್ರಿ ಜಪಾನುಷ್ಠಾನ, ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ಎರಡು ದಿನಗಳಿಂದ ನಡೆಸಿದ ಪ್ರಯತ್ನ… Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!