ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ -2026 ( SIR ) ಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕರಡುಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಅದರಂತೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 173426 ಎನ್ಯುಮರೇಷನ್ ನಮೂನೆಗಳ ಗಣಕೀಕರಣ ಮಾಡಲಾಗಿದೆ ಎಂದು ಕ್ಷೇತ್ರ ಮತದಾರರ ನೊಂದಣಾಧಿಕಾರಿ ಕೆ.ಎಚ್.ಪಾಂಡು ತಿಳಿಸಿದ್ದಾರೆ.

ಅವರು ಸೋಮವಾರ ತಹಶೀಲ್ದಾರ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 1,89,528 ಮತದಾರರಿದ್ದಾರೆ, 1,80,324 ಮತದಾರರ ಮ್ಯಾಪಿಂಗ್ ಮಾಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, 12 ಹೊಸ ಮತಗಟ್ಟೆಗಳನ್ನು ಸೃಜಿಸಲಾಗಿದೆ. ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಮತದಾರರು ಖಚಿತಪಡಿಸಿಕೊಳ್ಳಬೇಕು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆ.24ರಿಂದ ಸೆ.23ರ ವರೆಗೆ ಅವಕಾಶವಿದೆ. ಹಕ್ಕು ಮತ್ತು ಆಕ್ಷೇಪಗಳ ವಿಚಾರಣೆಯನ್ನು ಆ.24ರಿಂದ ಅ.22ರ ವರೆಗೆ ನಡೆಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಅ.27 ಕ್ಕೆ ಪ್ರಕಟಿಸಲಾಗುವುದು ಎಂದರು.

ಕರಡು ಮತದಾರರ ಪಟ್ಟಿಯಲ್ಲಿರುವ ಹೆಸರು ಮತ್ತು ವಯಸ್ಸಿನಲ್ಲಿ ನ್ಯೂನತೆಗಳಿರುವ ಮತದಾರರಿಗೆ ಬಿ.ಎಲ್.ಒ.ಗಳ ಮೂಲಕ ಸೂಚನಾಪತ್ರ ನೀಡಲಾಗುವುದು, ಚುನಾವಣಾ ಆಯೋಗವು ಸೂಚಿಸಿರುವಂತೆ ಅಗತ್ಯ ದಾಖಲೆಗಳನ್ನು ವಿಚಾರಣಾ ಸ್ಥಳಗಳಲ್ಲಿ ಸಂಬಂಧಿಸಿದ ಮತದಾರರು ಸಲ್ಲಿಸಬೇಕು, ಕಡ್ಡಾಯವಾಗಿ ಸಂಬಂಧಿಸಿದ ಮತದಾರರು ಹಾಜರಿರಬೇಕು ಎಂದು ಅವರು ತಿಳಿಸಿದರು.

ಸೆಪ್ಟಂಬರ್ 23 ರ ವರೆಗಿನ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ, ದಿನಾಂಕ 1-10-2026 ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶವಿದ್ದು, ನಮೂನೆ-6 ರೊಂದಿಗೆ ನಿಗದಿತ ದಾಖಲೆಗಳೊಂದಿಗೆ ಡಿಕ್ಲೇರೇಷನ್ ಫಾರಂ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿಯಲ್ಲಿ ಹೆಸರನ್ನು ಕಡಿಮೆಗೊಳಿಸಲು ನಮೂನೆ-7 ಹಾಗೂ ವಿವಿಧ ತಿದ್ದುಪಡಿ ಹಾಗೂ ಹೆಸರನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಲು ಸಹ ಅವಕಾಶ ಇರುತ್ತದೆ ಎಂದು ಮತದಾರರ ನೋಂದಣಾಧಿಕಾರಿ ತಿಳಿಸಿದರು.

ನೋಡಲ್ ಅಧಿಕಾರಿ ಸತೀಶ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಚುನಾವಣಾ ವಿಭಾಗದ ಗೀತಾ ಜಾಧವ ಇದ್ದರು.

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading