25-8-2026 ಮಂಗಳವಾರ

ಸುಜ್ಞಾನ ಮೀಡಿಯಾ ನ್ಯೂಸ್ ಡೆಸ್ಕ್
ಯಲ್ಲಾಪುರ

ಶ್ರಾವಣ ಮಾಸವು ಆರಂಭವಾಯಿತೆಂದರೆ ಸಾಲು, ಸಾಲಾಗಿ ಬರುವ ಹಬ್ಬಗಳ ಸಂಭ್ರಮವೂ ಕಳೆಗಟ್ಟುತ್ತದೆ. ಹಬ್ಬಗಳ ಆಚರಣೆಗೆಂದು ಮಾರುಕಟ್ಟೆಯಲ್ಲಿ ವಿವಿಧ ಅಗತ್ಯ ವಸ್ತುಗಳ ಖರೀದಿಯ ಭರಾಟೆಯೂ ಜೋರಾಗುತ್ತದೆ. ಆದರೆ ಈಬಾರಿ ಹಬ್ಬಗಳ ಸಂದರ್ಭದಲ್ಲಿಯೇ ಹಲವು ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗುತ್ತಿದ್ದು, ಹಬ್ಬಗಳ ಖುಷಿಯಲ್ಲಿದ್ದ ಗ್ರಾಹಕರು ಕಸಿವಿಸಿಗೊಳ್ಳುವಂತಾಗಿದೆ. ನೂಲು ಹುಣ್ಣಿಮೆ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳು ಸದ್ಯದಲ್ಲಿಯೇ ಇವೆ. ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಬೀಳುತ್ತಿದೆ.

ಹಬ್ಬಗಳ ಆಚರಣೆಗಳಿಗೆ ಧಾರ್ಮಿಕ ಮಹತ್ವ ಇರುವಂತೇ, ಖುಷಿಯ, ಸಂಭ್ರಮದ ಆಚರಣೆಯೂ ಇದೆ. ಹೀಗಾಗಿ ಈ ಸಂದರ್ಭಗಳಲ್ಲಿ ಕಿರಾಣಿ ವಸ್ತುಗಳ ಖರೀದಿ, ಹಣ್ಣು, ಹೂವು, ತರಕಾರಿಗಳ ಖರೀದಿ, ನಾನಾ ನಿತ್ಯ ಬಳಕೆಯ ವಸ್ತುಗಳ ಖರೀದಿಯೂ ಸಹ ವರ್ಷದ ಬೇರೆ ಸಮಯಕ್ಕಿಂತ ತುಸು ಹೆಚ್ಚೆ ಇರುತ್ತದೆ. ಆದರೆ ಈಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟುತ್ತಿದೆ. ಹೀಗಾಗಿ ಹಭ್ಭಗಳ ಆಚರಣೆಯ ಸಡಗರ, ಸಂಭ್ರಮಕ್ಕೆ ಕೊಂಚ ತಣ್ಣೀರೆರಚಿದಂತಾಗಿದೆ. ಅಗತ್ಯ ವಸ್ತುಗಳ ಖರೀದಿಯ ಅನಿವಾರ್ಯತೆ ಒಂದೆಡೆಯಾದರೆ ಬೆಲೆ ಏರಿಕೆಯ ಪರಿಣಾಮವು ಗ್ರಾಹಕರ ಜೇಬಿಗೆ ಭಾರವಾಗಿ ಪರಿಣಮಿಸುತ್ತಿದೆ.

ಈವಾರ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆಯು ವಿಪರೀತವಾಗಿ ಏರಿಕೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ದರ ಪ್ರತೀ ಕೆ.ಜಿ.ಗೆ 70 ರೂ ಇದೆ. ಕಳೆದ ವಾರ ಒಂದು ಕೆಜಿ ಸಕ್ಕರೆಗೆ 44 ರಿಂದ 48 ರೂ ಇತ್ತು. ದಿಢೀರ್ ಆಗಿ ಸಕ್ಕರೆ ದರ ಏರಿಕೆಯಾಗಿರುವುದು ಸಕ್ಕರೆ ಖರೀದಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಹಬ್ಬಗಳ ಸಂದರ್ಭದಲ್ಲಿಯೇ ಸಕ್ಕರೆ ದರ ವಿಪರೀತವಾಗಿ ಏರಿಕೆಯಾಗಿರುವ ಕಾರಣ ಸಿಹಿ ತಿಂಡಿಗಳ ತಯಾರಿಗೆ ಹಾಗೂ ನಾನಾ ಭಕ್ಷ್ಯಗಳ ತಯಾರಿಗೆ ಅಡ್ಡಿಯಾಗಿದೆ. ಸಂಪ್ರದಾಯದಂತೆ ಹಬ್ಬದಲ್ಲಿ ಸಿಹಿ ಪದಾರ್ಥಗಳನ್ನು ಮಾಡುವುದು ವಾಡಿಕೆ, ಆದರೆ ಸಕ್ಕರೆ ದರ ಏರಿಕೆಯಿಂದ ಸಿಹಿಪದಾರ್ಥಗಳ ತಯಾರಿಸುವುದನ್ನು ಕೈಬಿಡುವುದು ಅನಿವಾರ್ಯ ಎನ್ನುತ್ತಾರೆ ಗೃಹಿಣಿಯರು.

ಪ್ರಸ್ತುತ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಧಾರಣೆ ಏರಿಕೆಯಾಗಿದೆ. ಬಾಳೆಹಣ್ಣು, ಸೇಬು ಹಣ್ಣು ದರ ಗಗನಮುಖಿಯಾಗಿದೆ. ಮಲ್ಲಿಗೆ ಹೂವು, ಸೇವಂತಿಗೆ ಮುಂತಾದ ಹೂವುಗಳ ದರವೂ ದುಪ್ಪಟ್ಟಾಗಿದೆ. ಈರುಳ್ಳಿ ದರವಂತೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತದೆ. ಅಡುಗೆ ಎಣ್ಣೆ, ಕಲ್ಲುಪ್ಪು ಮುಂತಾದವುಗಳ ಬೆಲೆಯೂ ಸಹ ಏರಿಕೆಯಾಗಿದ್ದು ಗ್ರಾಹಕರು ಪರದಾಡುವಂತಾಗಿದೆ. ಅಗತ್ಯ ವಸ್ತುಗಳ ದರ ಏರಿಕೆಯಾಗಿರುವುದು ಅಂಗಡಿಕಾರರಿಗೂ ಖುಷಿ ತಂದಿಲ್ಲ. ಏಕೆಂದರೆ ವಸ್ತುಗಳ ಖರೀದಿಯ ಪ್ರಮಾಣವೂ ಕುಸಿತವಾಗಿದೆ. ಒಟ್ಟಿನಲ್ಲಿ ಬೆಲೆ ಏರಿಕೆಯ ಬಿಸಿಯಿಂದ ಜನರು ಹೈರಾಣಾಗುತ್ತಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ.

==============

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading