ಮರ್ಚಂಟ್ಸ್ ಕೋ-ಆಪರೇಟಿವ್ ಸೊಸೈಟಿಗೆ 26.98 ಲಕ್ಷ ರೂ ನಿವ್ವಳ ಲಾಭ: ಎಸ್.ಎಂ.ಭಟ್ಟ
ಯಲ್ಲಾಪುರ ಪಟ್ಟಣದ ಮರ್ಚಂಟ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಕಳೆದ ಆರ್ಥಿಕ ವರ್ಷದಲ್ಲಿ 26.98 ಲಕ್ಷ ರೂ ನಿವ್ವಳ ಲಾಭವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಸ್.ಎಂ.ಭಟ್ಟ ಮೂಲೆಗುಂಡ್ಕಲ್ ಹೇಳಿದರು.
ಅವರು ಗುರುವಾರ ಸೊಸೈಟಿಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮರ್ಚಂಟ್ಸ್ ಕೋ-ಆಪರೇಟಿವ್ ಸೊಸೈಟಿಯು ಪ್ರಸಕ್ತ ವರ್ಷ ರಜತ ಮಹೋತ್ಸವವನ್ನು ಆಚರಿಕೊಳ್ಳುತ್ತಿದೆ. ಸೊಸೈಟಿಯು ಎಲ್ಲರ ಸಹಕಾರದಿಂದ ನಿರಂತರವಾಗಿ ಲಾಭ ಗಳಿಸುತ್ತಾ ಬಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 28.39 ಕೋಟಿ ರೂ ವ್ಯವಹಾರ ನಡೆಸಲಾಗಿದೆ.
ಸದಸ್ಯರಿಗೆ ಶೇ.10 ಲಾಭಾಂಶ ನೀಡಲಾಗುವುದು. ಸೊಸೈಟಿಯು ಸದಸ್ಯರ, ಠೇವಣಿದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರ ನಡೆಸುತ್ತಿದೆ. ಸೊಸೈಟಿಗೆ 2114 ಸದಸ್ಯರಿದ್ದು, 52.38 ಲಕ್ಷ ರೂ ಶೇರು ಬಂಡವಾಳ ಇದೆ. 5.50 ಕೋಟಿ ರೂ ಠೇವಣಿ ಹೊಂದಿದೆ. ಸಾಲ ವಸೂಲಾತಿ ಪ್ರಮಾಣ ಶೇ.89 ರಷ್ಟು ಆಗಿದೆ ಎಂದರು.
ಪ್ರಸಕ್ತ ರಜತ ವರ್ಷದ ಸಂಭ್ರಮದಲ್ಲಿ ಸೊಸೈಟಿಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ನಾನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. ಮರ್ಚಂಟ್ಸ್ ಕೋ-ಆಪರೇಟಿವ್ ಸೊಸೈಟಿಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಸೊಸೈಟಿಯ ವಾರ್ಷಿಕ ಮಹಾಸಭೆಯು ಸೆ.5ರಂದು ಮಧ್ಯಾಹ್ನ 4 ಗಂಟೆಗೆ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೇದವ್ಯಾಸ ಹೆಗಡೆ, ನಿರ್ದೇಶಕರಾದ ಪುಂಡಲೀಕ ಶೆಟ್ಟಿ, ಪರಶುರಾಮ ಕೊರವರ್, ಇಂದ್ರಜಿತ್ ಮಹಾಲೆ, ನಾಗರಾಜ ಮದ್ಗುಣಿ, ವೀಣಾ ಯಲ್ಲಾಪುರಕರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ರಾಮಚಂದ್ರ ಭಟ್ಟ ಇದ್ದರು.