





ಮದ್ಯವರ್ಜನ ಶಿಬಿರಗಳು ಶಿಬಿರಾರ್ಥಿಗಳಿಗೆ ಪುನರ್ಜನ್ಮ ಇದ್ದಂತೆ

ಮದ್ಯವರ್ಜನ ಶಿಬಿರಗಳು ಶಿಬಿರಾರ್ಥಿಗಳಿಗೆ ಪುನರ್ಜನ್ಮ ಇದ್ದಂತೆ. ಕುಡಿತದ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಂಡವರು ಹಲವರಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮದ್ಯ ವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಅಂತವರಿಗೆ ಹೊಸ ಜೀವನವನ್ನು ನೀಡುವ ಕೆಲಸ ಮಾಡುತ್ತಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ಯಲ್ಲಾಪುರ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಯಲ್ಲಾಪುರ, ಮುಂಡಗೋಡ ತಾಲೂಕು ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 2114ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪೂಜ್ಯ ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮದ್ಯ ವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ. 2114 ನೇ ಶಿಬಿರ ಯಲ್ಲಾಪುರದಲ್ಲಿ ನಡೆಯುತ್ತಿದೆ.
ಶಿಬಿರಾರ್ಥಿಗಳು ಈ ಶಿಬಿರದಿಂದ ಹೊಸ ಜೀವನವನ್ನು ಆರಂಭಿಸಬೇಕು. ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಪಡೆದುಕೊಳ್ಳಬೇಕು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳು ಜೀವನದಲ್ಲಿ ಮತ್ತೆ ಮದ್ಯವನ್ನು ಸೇವಿಸುವುದಿಲ್ಲ ಎಂಬ ದೃಢ ಸಂಕಲ್ಪವನ್ನು ಮಾಡಬೇಕು. ಶಿಬಿರಾರ್ಥಿಗಳ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಗಣೇಶ ಹೆಗಡೆ, ಲೋಕೇಶ, ವೀಣಾ ಯಲ್ಲಾಪುರಕರ್ , ಸುನಂದ ದಾಸ್, ಗ.ರಾ ಭಟ್ಟ ಮುಂತಾದವರು ಇದ್ದರು.
ಕಪ್ಪೆಮಠದಲ್ಲಿ ಯಶಸ್ವಿಯಾದ ಯಕ್ಷಗಾನ ನಾಟ್ಯ ವೈಭವ
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಕಪ್ಪೆಮಠದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಶುಕ್ರವಾರ ಬೆಳಿಗ್ಗೆ ವೈದಿಕ ಕಾರ್ಯಕ್ರಮದ ಜೊತೆಗೆ ಪಂಚಾಮೃತ ಅಭಿಷೇಕ, ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.

ಸಂಜೆ ನಡೆದ ಯಕ್ಷಗಾನ ನಾಟ್ಯ ವೈಭವದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಯಕ್ಷ ಮಾಣಿಕ್ಯ ಚಿಂತನಾ ಮಾಳ್ಕೋಡು, ಹರೀಶ ಗಾಂವ್ಕರ ಶೆಳೆಮನೆ, ಮದ್ದಳೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಗಣೇಶ ಗಾಂವ್ಕರ ಶೆಳೆಮನೆ, ಚೆಂಡೆಯಲ್ಲಿ ರವಿ ಕಾಡೂರು, ರೋಹಿತ್ ಗಾಂವ್ಕರ ಗಾನ ವೈಭವ ಸಾಕ್ಷಾತ್ಕಾರಿಸಿದರು. ನಾಟ್ಯದಲ್ಲಿ ಸಂದರ್ಭ ಮಾತುಗಳೊಂದಿಗೆ ಯಕ್ಷಗಾನ ಆಯ್ದ ಮತ್ತು ಶ್ವೇತಕುಮಾರ ಚರಿತ್ರೆ ಪ್ರಸಂಗದ ಪದ್ಯಗಳಿಗೆ ಮುಮ್ಮೇಳದ ಪುರುಷ ಪಾತ್ರದಲ್ಲಿ ಕಾರ್ತಿಕ ಭಟ್ ಕಣ್ಣೀಮನೆ, ಸ್ತ್ರೀ ಪಾತ್ರದಲ್ಲಿ ನಾಗರಾಜ ಕುಂಕಿಪಾಲ ಅಭಿನಯಿಸಿದರು.ರವೀಂದ್ರ ಗಾಂವ್ಕರ್ ಸ್ವಾಗತಿಸಿದರು. ನರಸಿಂಹ ಗಾಂವ್ಕರ್ ವಂದಿಸಿದರು. ಪರಮೇಶ್ವರ ಪಟಗಾರ, ಅಣ್ಣಪ್ಪ ಪೂಜಾರಿ ಸಹಕರಿಸಿದರು.

==============













