ಅರಬೈಲ್ ಘಟ್ಟದಲ್ಲಿ ಭೀಕರ ಸರಣಿ ಅಪಘಾತ: ಕಾರಿನಲ್ಲಿದ್ದ ಇಬ್ಬರ ಸಾವು
ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನಲ್ಲಿ ರವಿವಾರ ರಾತ್ರಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಘಟನೆಯ ವಿವರ
ಹೊಸಪೇಟೆಯ ಕಾರು ಚಾಲಕ ಆಲಂಭಾಷಾ ವಲಿಸಾನ್ ಶೇಖ್ ತನ್ನ ಕಾರಿನಲ್ಲಿ ಇಬ್ಬರನ್ನು ಕೂರಿಸಿಕೊಂಡು, ಪ್ರವಾಸಕ್ಕೆಂದು ಬಾದಾಮಿಯಿಂದ ಗೋಕರ್ಣದ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುವಾಗ, ಯಲ್ಲಾಪುರ ತಾಲೂಕಿನ ಅರಬೈಲ ಘಟ್ಟದ ತಿರುವಿನಲ್ಲಿ ರಾತ್ರಿ 7.30 ಗಂಟೆಗೆ
ಯಲ್ಲಾಪುರ ಕಡೆಯಿಂದ ಅತೀ ವೇಗವಾಗಿ ಚಲಾಯಿಸಿಕೊಂಡುಬಂದ ಲಾರಿಯೊಂದು ಆಲಂಭಾಷಾ ವಲೀಸಾನ್ ಶೇಕ್ ಅವರ ಕಾರಿಗೆ ಹಿಂದಿನಿಂದ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಮುಂದಿನಿಂದ ಹೋಗುತ್ತಿದ್ದ ಇನ್ನೊಂದು ಲಾರಿಯ ಹಿಂಬದಿಗೆ ಡಿಕ್ಕಿಯಾಗಿ, ಜಕಂಗೊಂಡಿದೆ.
ಈ ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ರಾಜ್ಯದ ಪುಣೆಯ ಮಹಮ್ಮದ್ ವಾಡಿ ನಿವಾಸಿಗಳಾದ 32 ವರ್ಷದ ಮೃಣ್ಮಯ ರಾಜನ್ ಕುಲ್ಥೆ ಹಾಗೂ 59 ವರ್ಷದ ಶರ್ಮಿಲಾ ರಾಜನ್ ಕುಲ್ಥೆ ಅವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇದೇ ಮಾರ್ಗವಾಗಿ ಸಾಗುತ್ತಿದ್ದ ಇನ್ನೊಂದು ಕಾರು ಸಹ ಜಕಂಗೊಂಡಿದೆ. ಕಾರು ಚಾಲಕನಿಗೆ ಗಾಯವಾಗಿದೆ.ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.