
31-8-2021. ಮಂಗಳವಾರ
e-yellapur.com

ಪ್ರಕೃತಿ ವಿಕೋಪದಿಂದ ಭೂಕುಸಿತಕ್ಕೊಳಗಾದ ತಾಲೂಕಿನ ಕಳಚೆ, ತಳಕೆಬೈಲ್ ಹಾಗೂ ಅರಬೈಲ್ ಘಟ್ಟ ಮತ್ತು ಕೊಚ್ಚಿಹೋದ ಗುಳ್ಳಾಪುರದ ಗಂಗಾವಳಿ ಸೇತುವೆ ಪ್ರದೇಶಕ್ಕೆ ಮಂಗಳವಾರ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ನೀಡಿದರು.

ಕಳಚೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಭೂಕುಸಿತದಿಂದ ಆದ ಹಾನಿ ಮತ್ತು ಮುಂದಿನ ಪರಿಹಾರೋಪಾಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಆದ ಹಾನಿಯ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಚಿವರೊಂದಿಗೆ ಸಭೆ ಕರೆದು ಚರ್ಚಿಸುತ್ತೇನೆ.

ಸ್ಥಳೀಯರ ಅಭಿಪ್ರಾಯ ಪಡೆದು ಸೂಕ್ತ ಯೋಜನೆ ರೂಪಿಸಬೇಕಿದೆ. ಮೇಘಸ್ಪೋಟದಿಂದ ಜಿಲ್ಲೆಯಲ್ಲಿ ಎಂದೂ ಕಾಣದ ವ್ಯಾಪಕ ಹಾನಿ ಸಂಭವಿಸಿದೆ. ರಸ್ತೆಗಳು,ಸೇತುವೆಗಳು, ತೋಟ-ಗದ್ದೆಗಳಿಗೆ ಅಪಾರ ಹಾನಿಯಾಗಿದ್ದು, ಸಂಭವಿಸಿದ ಹಾನಿಯ ಕುರಿತು ಸರಕಾರಕ್ಕೆ ಈಗಾಗಲೇ ಸಮೀಕ್ಷಾ ವರದಿ ಸಲ್ಲಿಕೆಯಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿಯವರು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ ಕಾರಣ ಅವರಿಗೂ ಇಲ್ಲಿ ಆದ ಹಾನಿಯ ಕುರಿತು ಸಂಪೂರ್ಣ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಕೂಡಿದ ಸೂಕ್ತ ಪರಿಹಾರ ನೀಡುವ ಕುರಿತು ಆದ್ಯತೆ ನೀಡಲಾಗುತ್ತಿದೆ. ಸಂತ್ರಸ್ಥರಿಗೆ ಜೀವನ ಭದ್ರತೆ ಕಲ್ಪಿಸುವ ಮತ್ತು ವಿಶ್ವಾಸ ಮೂಡಿಸುವ ಕಾರ್ಯ ಆಗಬೇಕಿದೆ.

ಆದ ಹಾನಿಯ ವಾಸ್ತವದ ಆಧಾರದಲ್ಲಿ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕಿದೆ. ಜಮೀನು, ಮನೆ ಹಾನಿಯಾದ ಅತಿಕ್ರಮಣದಾರರಿಗೂ ಸೂಕ್ತ ಪರಿಹಾರ ಸಿಗಬೇಕಿದೆ, ಈ ನಿಟ್ಟಿನಲ್ಲಿ ಇಂತಹ ಸಂಕಷ್ಟದ ಸಂದರ್ಭದಲ್ಲಿ ನೊಂದವರಿಗೆ ನೆರವು ನೀಡಲು ಕೆಲವು ನಿಯಮಾವಳಿಗಳನ್ನು ತಿದ್ದುಪಡಿ ಮಾಡುವುದು ಅನಿವಾರ್ಯವಾಗಿದೆ .

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರಕಾರ ಮತ್ತು ವಿವಿಧ ಇಲಾಖೆಯವರು ಮತ್ತು ಸಾರ್ವಜನಿಕರು ಮಾನವೀಯ ನೆಲೆಯಲ್ಲಿ ಸಂತ್ರಸ್ತರಿಗೆ ವಿವಿಧ ರೀತಿಯಲ್ಲಿ ತಕ್ಷಣದ ನೆರವನ್ನು ನೀಡಿದ್ದಾರೆ. ಇದಕ್ಕಾಗಿ ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಾ.ಕರಾ.ರ.ಸಾ.ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್, P.S.I ಮಂಜುನಾಥ ಗೌಡರ್, ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್, ಇಡಗುಂದಿ ಆರ್.ಎಫ್.ಒ. ಪ್ರಸಾದ್ ಪೆಡ್ನೇಕರ್, ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಜಗದೀಶ ಕಮ್ಮಾರ್, ಪ್ರಮುಖರಾದ ಉಮೇಶ ಭಾಗ್ವತ್, ಗಜಾನನ ಭಟ್ಟ, ತಾಲೂಕಾ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ್, ಗಣಪತಿ ಬೋಳಗುಡ್ಡೆ, ಹಾಗೂ ಸ್ಥಳೀಯರು ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/KlvHKrtcQbl1m1rcati7gv
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589/













