ನಮ್ಮ ಸಂಸ್ಥೆ ವ್ಯಾಪ್ತಿಗೆ ಒಳಪಡುವ 11 ಗ್ರಾಮಗಳ ಸುಮಾರು 90 ರಷ್ಟು ರೈತರು ಬೆಳೆ ವಿಮೆಗಳ ಫಲಾನುಭವಿಗಳಾಗಿದ್ದಾರೆ. ಕೇಂದ್ರ ಸರ್ಕಾರ 3ಲಕ್ಷದ ವರೆಗೆ ಬೆಳೆ ಸಾಲವನ್ನು ಕೊಡುತ್ತದೆ. ರಾಜ್ಯ ಸರ್ಕಾರ ಬೆಳೆ ಸಾಲ ಅನುಕೂಲ ಒದಗಿಸುತ್ತದೆ. ನಾವು ಕಾಳುಮೆಣಸಿಗೂ ಬೆಳೆ ಸಾಲಸೌಲಭ್ಯ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಹೀಗೆ ಬೆಳೆಸಾಲ ಪಡೆದ ರೈತರಿಗೆ ಲಕ್ಷಕ್ಕೆ ಗರಿಷ್ಠ 12 ಸಾವಿರದ ವರೆಗೆ ಉಳಿತಾಯವಾಗುತ್ತದೆ ಎಂದು ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಹೇಳಿದರು.
ಅವರು ಉಮ್ಮಚಗಿ ಸೊಸೈಟಿಯ ಸಭಾಭವನದಲ್ಲಿ ಕೆ.ಡಿ.ಸಿ.ಸಿ.ಬ್ಯಾಂಕ್ ಶಿರಸಿ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚ್ಗಿ ಇವುಗಳ ಸಹಯೋಗದೊಂದಿಗೆ ಕೆಡಿಸಿಸಿ ಬ್ಯಾಂಕಿನ ಕೆ.ಸಿ.ಸಿ.ಸ್ಯಾಚುರೇಶನ್ ಅಭಿಯಾನದ ಅಂಗವಾಗಿ ನಡೆದ ಮಾಹಿತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತಾಲೂಕು ತೋಟಗಾರಿಕಾ ಇಲಾಖೆಯ ಅಧಿಕಾರಿ ಸತೀಶ ಹೆಗಡೆ ಮಾತನಾಡಿ, ಬೆಳೆವಿಮೆಗಳ ಕುರಿತು ತಿಳಿಸಿದರು. ಮಳೆಗಾಲದಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳ ನಿರ್ವಹಣೆಯ ಬಗ್ಗೆ ವಿವರಣೆ ನೀಡಿದರು. ತುತ್ತ,ಸುಣ್ಣಗಳ ಸರಿಯಾದ ಪ್ರಮಾಣದ ಬೆರೆಸುವಿಕೆಯ ಕುರಿತು ಮಾಹಿತಿ ನೀಡಿದರು. ಮಂಚಿಕೇರಿ ಕೆಡಿಸಿಸಿ ಬ್ಯಾಂಕಿನ ಮೇನೇಜರ್ ಆರ್.ಜಿ.ಉಪಾಧ್ಯ ಅವರು, ಬ್ಯಾಂಕಿನ ಸಾಲ ಸೌಲಭ್ಯ ಮತ್ತು ರೈತರಿಗೆ ಸಿಗುವ ಅನುಕೂಲಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ವಿಎಸ್‍ಎಸ್ ಕಾರ್ಯದರ್ಶಿ ನಾಗೇಂದ್ರ ಗೌಡ, ಉಪಾಧ್ಯಕ್ಷ ಎಂ.ಪಿ.ಹೆಗಡೆ ಚವತ್ತಿ, ಕೆ.ಡಿ.ಸಿ.ಸಿ. ಬ್ಯಾಂಕ್ ಸಾಲಯೋಜನೆಯ ಮೇಲ್ವಿಚಾರಕ ವಿಶ್ವನಾಥ ಭಟ್ಟ, ತೋಟಗಾರಿಕಾ ಇಲಾಖೆಯ ಶಿವಾನಂದ, ವಿಷ್ಣು ಗೌಡರ್ ಮೊದಲಾದವರು ಉಪಸ್ಥಿತರಿದ್ದರು. ಚನ್ನಪ್ಪ ಗೌಡ ನಿರ್ವಹಿಸಿದರು.