ನೂಲು ಹುಣ್ಣಿಮೆ ಹಾಗೂ ರಕ್ಷಾಬಂಧನ ಹಬ್ಬವನ್ನು ಶುಕ್ರವಾರ ಯಲ್ಲಾಪುರ ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಉಪಾಕರ್ಮ ಹಾಗೂ ಸಾಮೂಹಿಕ ಯಜ್ಞೋಪವೀತ ಧಾರಣ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಪಟ್ಟಣದ ಗ್ರಾಮದೇವಿ ದೇವಾಲಯ ಹಾಗೂ ವಿವಿಧ ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು.
ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯ ಹಾಗೂ ರವೀಂದ್ರ ನಗರದ ಶಕ್ತಿ ಗಣಪತಿ ದೇವಾಲಯದಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣ ಕಾರ್ಯಕ್ರಮ ನಡೆಯಿತು. ನೂರಾರು ಜನರು ಯಜ್ಞೋಪವೀತ ಧಾರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಹೋದರತ್ವದ ಪ್ರತೀಕವಾದ ರಾಖಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ, ಸಿಹಿ ನೀಡಿ ಶುಭಾಶಯ ಕೋರಿದರು.
ಯಲ್ಲಾಪುರ ತಾಲೂಕಾ ಬಿಜೆಪಿ ಮಹಿಳಾ ಮೋರ್ಚಾದವರು ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ರಕ್ಷಬಂಧನ ಹಬ್ಬದ ಶುಭಕೋರಿ ಸಿಹಿ ಹಂಚಿದರು.