ಜಿಲ್ಲೆಯಲ್ಲಿ ಗೃಹಜ್ಯೋತಿ ಗ್ಯಾರಂಟಿಯ ಯೋಜನೆಯ ಪರಿಶೀಲನೆಯ ಕಾರ್ಯದಲ್ಲಿ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ನಿರ್ದೇಶನ ನೀಡಿದರು.

ಅವರು ಹಳಿಯಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
​ಗೃಹಜ್ಯೋತಿ ಯೋಜನೆಯಡಿ ಆಗಸ್ಟ್ 2023 ರಿಂದ ಜುಲೈ 2026 ರವರೆಗೆ 3 ವರ್ಷಗಳ ಉಚಿತ ವಿದ್ಯುತ್ ಸರಬರಾಜಿನ ವೆಚ್ಚ ರೂ.641.45 ಕೋಟಿಗಳನ್ನು ಸರ್ಕಾರವೇ ಭರಿಸಿದೆ. ಪ್ರಸ್ತುತ ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ಮನೆ ಮನೆ ಪರಿಶೀಲನೆ ಸಮಯದಲ್ಲಿ ಅರ್ಹ ಫಲಾನುವಿಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯವು ತಲುಪುತ್ತಿರುವ ಬಗ್ಗೆ ಪರಿಶೀಲಿಸಿ, ಅರ್ಹರು ಯೋಜನೆಯಿಂದ ವಂಚಿತರಾಗದಂತೆ ಎಚ್ಚರವಹಿಸುವುದರ ಜೊತೆಗೆ ಸಾರ್ವಜನಿಕರಿಂದ ದಾಖಲೆ ಸಂಗ್ರಹಿಸುವ ಸಮಯದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಶಕ್ತಿ ಯೋಜನೆಗೆ ಸಂಬಂಧಿಸಿದಂತೆ, ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಮತ್ತು ಶೌಚಾಲಯಗಳ ನಿರ್ವಹಣೆ ಕುರಿತಂತೆ ಸಂಬಂಧಪಟ್ಟ ಟೆಂಡರ್‍ದಾರರಿಗೆ ಸೂಚನೆಗಳನ್ನು ನೀಡುವಂತೆ ತಿಳಿಸಿ, ​ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ವಿವರವಾದ ಮಾಹಿತಿ ಹಾಗೂ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ, ಸರ್ವರ್ ಸಮಸ್ಯೆಯ ಕುರಿತಂತೆ ಅಧಿಕಾರಿಗಳು ಶೀಘ್ರದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಯುವನಿಧಿ ಯೋಜನೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಪರಿಶೀಲಿಸಿ, ಅರ್ಹ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಕುರಿತು ಸೂಚನೆ ನೀಡಿದರು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮೃತಪಟ್ಟ ಫಲಾನುಭವಿಗಳ ಮಾಹಿತಿಯನ್ನು ಸರಿಪಡಿಸಿ, ಬಿಟ್ಟು ಹೋದ ಅರ್ಹ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಬಕಷ್ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೂಕ್ತ ರೀತಿಯಲ್ಲಿ , ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧÀ್ಯಕ್ಷ ನಾಗರಾಜ್ ಮುರ್ಡೇಶ್ವರ, ಪುರುಷೋತ್ತಮ ನಾಯಕ್, ಜನಾರ್ಧನ್ ದೇವಾಡಿಗ, ಹಳಿಯಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಲಾಸರಾಜ್ ಪ್ರಸನ್ನ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ ಗಳಿಗೆ ಏಕಕಾಲದಲ್ಲಿ ಅನಿರೀಕ್ಷಿತ ಭೇಟಿ ನೀಡಿ, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಕುರಿತು ಪರಿಶೀಲನೆ ನಡೆಸಬೇಕು ಎಂದು ಪಿಸಿ ಮತ್ತು ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕ್ರಿಮ್ಸ್ ನ ಸ್ತ್ರೀ ರೋಗ ತಜ್ಞ ಡಾ.ನರೇಶ್ ಪಾವಸ್ಕರ ತಿಳಿಸಿದರು.

ಅವರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ 82 ಸ್ಕ್ಯಾನಿಂಗ್ ಸೆಂಟರ್‍ ಗಳು ಕಾರ್ಯನಿರ್ವಹಿಸುತ್ತಿದ್ದು, ಆಯ್ದ ತಾಲೂಕುವಾರು ಕೇಂದ್ರಗಳಿಗೆ ಏಕಕಾಲದಲ್ಲಿ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಮತ್ತು ಈ ಕೇಂದ್ರಗಳಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಕುರಿತು ಸಂಪೂರ್ಣ ಪರಿಶೀಲನೆ ನಡೆಸಬೇಕು. ಹೊಸದಾಗಿ ನೋಂದಣಿ ಮಾಡುವ ಸ್ಕ್ಯಾನಿಂಗ್ ಸೆಂಟರ್‍ ಗಳ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಿ, ಅನುಮತಿಯನ್ನು ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಜಯ ದೊಡ್ಡಮನಿ, ಸದಸ್ಯರಾದ ಕ್ರಿಮ್ಸ್ ನ ಸಹ ಪ್ರಾಧ್ಯಾಪಕರು ಹಾಗೂ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪವನಕುಮಾರ್ ಡಿ, ರೇಡಿಯಾಲಜಿಸ್ಟ್, ಡಾ. ಚಂದನಾ ನಾಯಕ ಅಂಕೋಲಾ, ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಿನಿ ಬೋರ್ಕರ್, ಸಾಮಾಜಿಕ ಕಾರ್ಯಕರ್ತರದ ಯಶೋಧ ಹೆಗಡೆ, ಶ್ರೀಕಾಂತ ಎಮ್. ನಾಯ್ಕ, ಹೇಮಲತಾ ತಾಂಡೇಲ್, ಆರೋಗ್ಯ ಇಲಾಖೆಯ ಪ್ರ.ದ.ಸಹಾಯಕ ರತೀಶ್ ಸಿ ನಾಯ್ಕ ಇದ್ದರು.

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯತ ಕಾರವಾರ ಹಾಗೂ ತಾಲೂಕಾ ಪಂಚಾಯತ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆ(ಎನ್.ಆರ್.ಎಲ್.ಎಮ್), ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಆ.31 ರಿಂದ ಸೆ.9 ರವರೆಗೆ ಸಾಮಾನ್ಯ ವರ್ಗದ ಮಹಿಳೆಯರಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು, ತಾಲೂಕಾ ಪಂಚಾಯತ, ಅಂಕೋಲಾದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸಾಧನಾ ಪ್ರೇರಣಾ ತರಬೇತಿ, ಉದ್ಯಮಶೀಲರ ಸಾಮಥ್ರ್ಯಗಳನ್ನು ಗುರುತಿಸುವಿಕೆ, ವ್ಯವಸ್ಥಾಪನಾ ಕೌಶಲ್ಯಗಳು, ಹೊಸ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳು, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಲೆಕ್ಕ ಪತ್ರಗಳ ನಿರ್ವಹಣೆ, ಮಾರಾಟದ ತಂತ್ರಗಳು, ಸರ್ಕಾರದ ಯೋಜನೆಗಳು, ಬ್ಯಾಂಕ್‍ಗಳ ಪಾತ್ರ, ಉದ್ಯಮಶೀಲರ ಅನುಭವ ಹಂಚಿಕೆ, ಸಣ್ಣ ಉದ್ಯಮ ನಿರ್ವಹಣೆ, ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಈ ಅವಧಿಯಲ್ಲಿ ಒಂದು ದಿನ ಕೈಗಾರಿಕೆಗಳಿಗೆ ಭೇಟಿ ನೀಡಿ ಆ ಕೈಗಾರಿಕೆಗಳ ಮಾಲೀಕರ ಜೊತೆಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು.

ಉದ್ಯಮ ಪ್ರಾರಂಭಿಸಲು ಉತ್ಸುಕರಾಗಿರುವ ಅಂಕೋಲಾ ತಾಲೂಕಿನ ಸಾಮಾನ್ಯ ವರ್ಗದ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ. ಶಿಕ್ಷಣ ಹೊಂದಿರಬೇಕು. ಆಸಕ್ತಿಯುಳ್ಳ ಮಹಿಳೆಯರು ಆ.30 ರೊಳಗಾಗಿ ಉಪ ನಿರ್ದೇಶಕರು, ಸಿಡಾಕ್, ಶಿರವಾಡ, ಕಾರವಾರ ಇವರಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕಾರವಾರ ಸಿಡಾಕ್‍ನ ಉಪ ನಿರ್ದೇಶಕ ಶಿವಾನಂದ ವೆಂ. ಎಲಿಗಾರ, ಮೊ. ಸಂಖ್ಯೆ 9448812974 ಹಾಗೂ ತರಬೇತುದಾರರು ಪ್ರತಿಭಾ ಹೆಳವಿ, ತರಬೇತುದಾರರು ಮೋ ಸಂಖ್ಯೆ:9353119412) ಇವರನ್ನು ಸಂಪರ್ಕಿಸಬಹುದೆಂದು ಕಾರವಾರ ಸಿಡಾಕ್ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading