ಅಭಿವೃದ್ಧಿ ಕೆಲಸ ಸಂಪೂರ್ಣ ಸ್ಥಗಿತ: ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡರು
ಯಲ್ಲಾಪುರ ತಾಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಳೆಗಾಲದ ಕಾಮಗಾರಿಗಳು, ಸ್ವಚ್ಛತಾ ಕೆಲಸಗಳು ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಷ್ಟ್ರಿಯತೆಯಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಹದಿನೈದು ದಿನಗಳ ಒಳಗಾಗಿ ಸಾರ್ವಜನಿಕರಿಗೆ ಅಗತ್ಯವಾದ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಸ್ವಚ್ಛತಾ ಕೆಲಸಗಳನ್ನು ಮಾಡದಿದ್ದರೆ ತಾಲೂಕಾ ಪಂಚಾಯತಿ ಎದುರು ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕಾ ಬಿಜೆಪಿ ಉಪಾಧ್ಯಕ್ಷ ಗಣೇಶ ಹೆಗಡೆ ಕುಂದರ್ಗಿ ಎಚ್ಚರಿಕೆ ನೀಡಿದರು.
ಸೋಮವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಗಟಾರ ಸ್ವಚ್ಛತೆ, ರಸ್ತೆ ಕಾಮಗಾರಿಗಳು ನಿಂತಿವೆ. ಸ್ವಚ್ಛತಾ ಕೆಲಸ ಕೈಗೊಳ್ಳದಿರುವುದರಿಂದ ರೋಗರುಜಿನಗಳು ಹರಡುವ ಆತಂಕ ಎದುರಾಗಿದೆ.
ಗ್ರಾಮ ಪಂಚಾಯತಿಗಳು ಸ್ಥಳೀಯವಾಗಿ ಶೇ.85 ರಷ್ಟು ಕರ ವಸೂಲಾತಿ ಮಾಡಿದ ಪರಿಣಾಮ ಈಗ ಗ್ರಾಮ ಪಂಚಾಯತಿಗಳಲ್ಲಿ ಹಣಕಾಸಿನ ಕೊರತೆ ಇಲ್ಲ. ಈ ಹಣವನ್ನು ಅಗತ್ಯ ಕೆಲಸಗಳಿಗೆ ಬಳಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಷ್ಕ್ರಿಯತೆಯಿಂದ ಜನರ ಯಾವ ಕೆಲಸಗಳು ಆಗುತ್ತಿಲ್ಲ. ಗ್ರಾ.ಪಂ.ಸದಸ್ಯರ ಅಧಿಕಾರ ಅವಧಿ ಮುಗಿದು, ಅಧಿಕಾರಿಗಳ ಕೈಗೆ ಆಡಳಿತ ಬಂದಾಗಿನಿಂದ ಗ್ರಾಮ ಪಂಚಾಯತಿ ಆಡಳಿಯ ವ್ಯವಸ್ಥೆ ಸಂಪೂರ್ಣವಾಗಿ ಹಳಿತಪ್ಪಿದೆ ಎಂದು ಅವರು ದೂರಿದರು.
ಈ ಬಗ್ಗೆ ಜನರ ಪರವಾಗಿ ಬಿಜೆಪಿ ಪಕ್ಷವು ಪ್ರತಿಭಟನೆ ನಡೆಸಲು ಸಿದ್ಧವಾಗಿದ್ದು, ಹದಿನೈದು ದಿನಗಳ ಒಳಗಾಗಿ ವ್ಯವಸ್ಥೆ ಸುಧಾರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಬಿಜೆಪಿ ಕಾರ್ಯಕಾರಿಣಿ ಸದಸ್ಯ ಟಿ.ಆರ್.ಹೆಗಡೆ ತೊಂಡೆಕೆರೆ ಮಾತನಾಡಿ, ಕಳೆದ ಒಂದು ವರ್ಷದಿಂದ ಆಶ್ರಯ ಮನೆ ಯೋಜನೆಯ ಹಣ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಹೀಗಾಗಿ ಮನೆ ನಿರ್ಮಾಣ ಕೆಲಸ ಸ್ಥಗಿತಗೊಂಡು ಫಲಾನುಭವಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ರಸ್ತೆ ದುರಸ್ತಿ, ಗಟಾರ ಸ್ವಚ್ಛತೆ ಕೆಲಸಗಳು ಸಂಪೂರ್ಣವಾಗಿ ನಿಂತಿವೆ ಎಂದರು.
ಬಿಜೆಪಿ ಮುಖಂಡ ವಿಶ್ವನಾಥ ಹಳೆಮನೆ ಮಾತನಾಡಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ನಿಂತಿವೆ. ರಸ್ತೆ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿ ಆಗುತ್ತಿಲ್ಲ. ತಾಲೂಕಿನ ಬಿಸಗೋಡ ರಸ್ತೆಯು ತೀರಾ ಹದಗೆಟ್ಟಿದ್ದು, ಈ ಭಾಗದ ಸಾರ್ವಜನಿಕರು, ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಎಚ್ಚೆತ್ತು ಈ ರಸ್ತೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಟಿ.ಹೆಗಡೆ, ಸದಾಶಿವ ಚಿಕೊತ್ತಿ ಇದ್ದರು.