ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ ಮುಕ್ತಾಯ, ಸ್ಪರ್ಧೆಗೆ ಎಲ್ಲೆಡೆಯಿಂದ ಅತ್ಯುತ್ತಮ ಸ್ಪಂದನೆ
ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಸುಜ್ಞಾನ ಫೌಂಡೇಶನ್ ಯಲ್ಲಾಪುರ(ರಿ) ಹಾಗೂ E-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ, ಹಾಂಗ್ಯೋ ಐಸ್ಕ್ರೀಂ, ಟಿ.ಎಸ್.ಎಸ್ ಮತ್ತು ಗೌತಮ್ ಜುವೆಲರ್ಸ್ ಯಲ್ಲಾಪುರ ಇವರ ಪ್ರಾಯೋಜಕತ್ವದಲ್ಲಿ, ರಂಗಸಹ್ಯಾದ್ರಿ ಸಂಘಟನೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಉತ್ತರಕನ್ನಡ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2023 ಶನಿವಾರ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಸ್ಪರ್ಧೆಗೆ ಎಲ್ಲೆಡೆಯಿಂದ ಅತ್ಯುತ್ತಮ ಸ್ಪಂದನೆ
ಮುದ್ದುಕೃಷ್ಣ ವೇಷ ಫೋಟೊ ಸ್ಪರ್ಧೆಗೆ ಎಲ್ಲೆಡೆಯಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಈ ಸ್ಪರ್ಧೆಗೆ ಒಂದಕ್ಕಿಂತ ಒಂದು ಅಂದ,ಚಂದದ ಮುದ್ದುಕೃಷ್ಣನ ಫೋಟೋಗಳು ಬಂದಿವೆ. ಕರಾವಳಿ ತಾಲೂಕುಗಳಾದ ಕಾರವಾರ,ಅಂಕೋಲಾ,ಕುಮಟಾ,ಹೊನ್ನಾವರ,ಭಟ್ಕಳ ಮತ್ತು ಘಟ್ಟದ ಮೇಲಿನ ತಾಲೂಕುಗಳಾದ ಸಿದ್ದಾಪುರ,ಶಿರಸಿ,ಮುಂಡಗೋಡ,ಯಲ್ಲಾಪುರ,ಹಳಿಯಾಳ,ಜೋಯ್ಡಾ,ದಾಂಡೇಲಿ ವ್ಯಾಪ್ತಿಯಿಂದ 6 ವರ್ಷದ ಒಳಗಿನ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ವೈವಿಧ್ಯಮಯ ಸಾವಿರಾರು ಮುದ್ದುಕೃಷ್ಣರ ಭಾವಚಿತ್ರಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿದೆ.
ನಿರ್ಣಾಯಕರಿಂದ ಸ್ಪರ್ಧಾ ವಿಜೇತರ ಆಯ್ಕೆ.
ಈಗಾಗಲೇ ಸ್ಪರ್ಧಾ ನಿಯಮಾವಳಿಯಂತೆ ಬಂದಿರುವ ಮುದ್ದುಕೃಷ್ಣ ಫೋಟೋಗಳನ್ನು ಕ್ರೋಢೀಕರಿಸಲಾಗಿದ್ದು, ತಜ್ಞ ನಿರ್ಣಾಯಕರು ಫೋಟೋಗಳನ್ನು ಪರಿಶೀಲಿಸಿ ಸ್ಪರ್ಧಾ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ನಿರ್ಣಾಯಕರ ನಿರ್ಣಯವೇ ಅಂತಿಮವಾಗಿದೆ.
ಸ್ಪರ್ಧಿಗಳು, ಪಾಲಕರು ಹಾಗೂ E-ಯಲ್ಲಾಪುರ ಡಿಜಿಟಲ್ ನ್ಯೂಸ್ ಓದುಗರು, ಸಾರ್ವಜನಿಕರು ಈ ಸ್ಪರ್ಧೆಯ ಫಲಿತಾಂಶವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಸದ್ಯದಲ್ಲಿಯೇ ಸ್ಪರ್ಧಾ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುವುದು. ಸ್ಪರ್ಧೆಯಲ್ಲಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ವಿಜೇತರಿಗೆ ಮುಂದಿನ ದಿನಗಳಲ್ಲಿ ನಗದು ಬಹುಮಾನ,ಆಕರ್ಷಕ ಪಾರಿತೋಷಕ,ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಹತ್ತು ಸಮಾಧಾನಕರ ಬಹುಮಾನ ವಿಜೇತರಿಗೆ ಪಾರಿತೋಷಕ, ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.
ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮುದ್ದುಮಕ್ಕಳಿಗೆ ಹಾಗೂ ಪಾಲಕರಿಗೆ,ಪೋಷಕರಿಗೆ ಮನದುಂಬಿದ ಧನ್ಯವಾದಗಳು.